ಖಾಸಗಿ ನೌಕರರೂ ಯಶಸ್ವಿನಿ ವ್ಯಾಪ್ತಿಗೆ; ಮಾಸಿಕ 30 ಸಾವಿರ ರೂ. ವೇತನ ಮಿತಿಗೊಳಿಸಿ ಆದೇಶ: ನೋಂದಣಿಗೆ 31 ಕೊನೆಯ ದಿನ

Yashaswini
Published on

| ಆರ್. ತುಳಸಿಕುಮಾರ್ ಬೆಂಗಳೂರು

ಸಹಕಾರಿ ಕ್ಷೇತ್ರದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಯಶಸ್ವಿನಿ’ ಯೋಜನೆ ವ್ಯಾಪ್ತಿಗೆ ಈಗ ಖಾಸಗಿ ನೌಕರರನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಮೊದಲಿನ ಮಾರ್ಗಸೂಚಿ ಅನ್ವಯ ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು. ಈಗ ಮಾರ್ಗಸೂಚಿಯನ್ನು ಸ್ವಲ್ಪ ಬದಲಾವಣೆ ಮಾಡಿ ಮಾಸಿಕ 30 ಸಾವಿರ ರೂ. ಅಥವಾ ವಾರ್ಷಿಕ 3.60 ಲಕ್ಷ ರೂ. ವೇತನ ಪಡೆಯುವ ಖಾಸಗಿ ಕಂಪನಿಗಳ ನೌಕರರು ಸಹಕಾರಿ ಸದಸ್ಯರಾಗಿದ್ದರೆ ಯೋಜನೆಗೆ ಸೇರಬಹುದಾಗಿದೆ. ಇದರಿಂದಾಗಿ ಗಾರ್ವೆಂಟ್ಸ್ ಉದ್ಯೋಗಿಗಳು, ಸಣ್ಣ ಕೈಗಾರಿಕೆ ಘಟಕಗಳ ಕಾರ್ವಿುಕರು ಸೇರಿ ಯಾವುದೇ ಕ್ಷೇತ್ರದಲ್ಲಿ ಕಡಿಮೆ ವೇತನ ಪಡೆಯುತ್ತಿರುವ ನೌಕರರು ಯಶಸ್ವಿನಿ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ರಾಜ್ಯದೆಲ್ಲೆಡೆಯಿರುವ ಹಾಲು ಉತ್ಪಾದಕ ಸಂಘ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ ಕಡಿಮೆ ಸಂಬಳ/ಗೌರವಧನ ಪಡೆಯುತ್ತಿರುವ ಸಿಬ್ಬಂದಿ ಕೂಡ ಕುಟುಂಬ ಸದಸ್ಯರ ಹೆಸರಿನಲ್ಲಿ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

20 ಲಕ್ಷ ಸದಸ್ಯರ ನೋಂದಣಿ: 2022-23ನೇ ಸಾಲಿಗೆ ಒಟ್ಟು 30 ಲಕ್ಷ ಸದಸ್ಯರನ್ನು ನೋಂದಾಯಿಸಲು ಗುರಿ ಹೊಂದಲಾಗಿದೆ. ಡಿ.23ರವರೆಗೆ ರಾಜ್ಯಾದ್ಯಂತ 20 ಲಕ್ಷ ಸದಸ್ಯರು ಯೋಜನೆ ಫಲಾನುಭವಿಗಳಾಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಸರು ನೋಂದಣಿಗೆ ಡಿ.31 ಅಂತಿಮ ದಿನವಾಗಿದ್ದು, ಈ ಗಡುವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಯಶಸ್ವಿನಿ ಟ್ರಸ್ಟ್ ಪ್ರಮುಖರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಜ.1ರಿಂದ ಚಿಕಿತ್ಸೆ ಲಭ್ಯ: ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಜ.1ರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಆದರೆ, ಈ ದಿನಕ್ಕಿಂತ ಎರಡು ವಾರದ ಮೊದಲು ಯೋಜನೆಯಡಿ ಹೆಸರು ನೋಂದಣಿ ಆಗಿರಬೇಕು. ಗುಣಮಟ್ಟದ ಚಿಕಿತ್ಸೆ ಒದಗಿಸುವ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಟ್ರಸ್ಟ್ ಚರ್ಚೆ ನಡೆಸಿದೆ.

ಕಾರ್ಡ್ ವಿತರಣೆ ವಿಳಂಬ: ಯೋಜನೆಯಡಿ ನೋಂದಣಿಯಾದ ಸದಸ್ಯರ ಕುಟುಂಬಕ್ಕೆ ಪ್ರತ್ಯೇಕ ಸಂಖ್ಯೆಯುಳ್ಳ ಕಾರ್ಡ್​ಗಳನ್ನು ವಿತರಿಸಲಾಗುತ್ತದೆ.ಈ ಕಾರ್ಡ್​ಗಳನ್ನು ಹಾಜರುಪಡಿಸಿ ಫಲಾನುಭವಿಗಳು ಯೋಜನೆಯ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಆದರೆ, ಸದಸ್ಯರು ಈಗಷ್ಟೇ ಹೆಸರು ನೋಂದಾಯಿಸಿಕೊಳ್ಳುತ್ತಿರುವ ಕಾರಣ ಕಾರ್ಡ್​ಗಳ ಮುದ್ರಣ ತುಸು ವಿಳಂಬವಾಗಲಿದೆ. ಮುಂಬರುವ ಜನವರಿ ಅಂತ್ಯದೊಳಗೆ ವಿತರಣೆ ಆಗುವುದಿದ್ದರೂ, ಜ.1ರಿಂದಲೇ ಚಿಕಿತ್ಸೆ ಪಡೆಯಲು ಕಾರ್ಡ್ ಸಂಖ್ಯೆ ಆಧರಿಸಿಯೇ ಸೌಲಭ್ಯ ನೀಡಲು ಯಶಸ್ವಿನಿ ಟ್ರಸ್ಟ್ ನೆಟ್​ವರ್ಕ್ ಆಸ್ಪತ್ರೆಗಳಿಗೆ ಮಾಹಿತಿ ರವಾನಿಸಿದೆ.

ಜಿಲ್ಲಾ ಸಮನ್ವಯಾಧಿಕಾರಿಗೆ ಹೊಣೆ: ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಎಲ್ಲ ಜಿಲ್ಲೆಗಳಿಗೂ ಪ್ರತ್ಯೇಕ ಸಮನ್ವಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ಜಿಲ್ಲೆಗಳ ಸಹಕಾರ ಸಂಘಗಳ ಉಪನಿಬಂಧಕರು ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಸದಸ್ಯರ ನೋಂದಣಿಯಲ್ಲಿ ಸಮಸ್ಯೆ ಸಹಿತ ಎದುರಾಗುವ ಯಾವುದೇ ಸಂದೇಹಗಳನ್ನು ಆದ್ಯತೆ ಮೇಲೆ ಇತ್ಯರ್ಥಪಡಿಸಬೇಕಿದೆ. ಜತೆಗೆ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸಹಕಾರ ಇಲಾಖೆ ಹೊಣೆ ನೀಡಿದೆ.

ಖಾಸಗಿ ಕಂಪನಿಗಳಲ್ಲಿ ಕಡಿಮೆ ವೇತನ ಪಡೆಯುವ ನೌಕರರು ಸಹಕಾರ ಸಂಘಗಳಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರಿಗೆ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡ ಲಾಗಿದೆ. ಇಂತಹವರಿಗೆ ಮಾಸಿಕ ವೇತನದ ಮಿತಿ ವಿಧಿಸಲಾಗಿದೆ. | ಎ.ಸಿ.ದಿವಾಕರ್ ಹೆಚ್ಚುವರಿ ರಿಜಿಸ್ಟ್ರಾರ್, ಸಹಕಾರ ಇಲಾಖೆ

ಪ್ರತಿಷ್ಠಿತ ಆಸ್ಪತ್ರೆಗಳ ಹಿಂದೇಟು: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ (ಎಬಿಆರ್​ಕೆ) ಯೋಜನೆಯಡಿ ನಿಗದಿಪಡಿಸಿದ ಚಿಕಿತ್ಸಾ ದರ ಕಡಿಮೆ ಇರುವ ಕಾರಣ ‘ಯಶಸ್ವಿನಿ ಯೋಜನೆ’ಯ ಸೂರಿನಡಿ ಬರಲು ಪ್ರತಿಷ್ಠಿತ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಆಸ್ಪತ್ರೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರ ಮನವೊಲಿಸಲು ಇಲಾಖೆ ಉನ್ನತಾಧಿಕಾರಿಗಳು ಯತ್ನಿಸುತ್ತಿದ್ದಾರೆ. ಎಬಿಆರ್​ಕೆ ದರಪಟ್ಟಿ ಬಿಟ್ಟು ಹೊಸ ದರಕ್ಕೆ ಕೆಲವು ಖಾಸಗಿ ಸಂಸ್ಥೆಗಳು ಬೇಡಿಕೆಯಿಟ್ಟಿವೆ ಎನ್ನಲಾಗಿದೆ. 425 ಆಸ್ಪತ್ರೆಗಳೊಂದಿಗೆ ಒಡಂಬಡಿಕೆ: ಯಶಸ್ವಿನಿ ಯೋಜನೆಯಡಿ ರೋಗಿಗಳಿಗೆ 1650 ಬಗೆಯ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಈವರೆಗೆ 425 ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿವೆ. ಇದಕ್ಕಾಗಿ ಖಾಸಗಿ ಆಸ್ಪತ್ರೆ ಹಾಗೂ ಯಶಸ್ವಿನಿ ಹೆಲ್ತ್ ಕೇರ್ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿವೆ. ಇನ್ನೂ ಹಲವು ಖಾಸಗಿ ಆಸ್ಪತ್ರೆಗಳ ಒಡಂಬಡಿಕೆ ಮಾತುಕತೆ ಹಂತದಲ್ಲಿವೆ. ಈ ಮೊದಲು ಯೋಜನೆ ಜಾರಿಯಾದಾಗ 726 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿದ್ದವು. ಈಗ ಅವುಗಳ ಸಂಖ್ಯೆಯನ್ನು 1000ಕ್ಕೆ ವಿಸ್ತರಿಸಲು ಟ್ರಸ್ಟ್ ಗುರಿ ಹೊಂದಿದೆ.

ನೋಂದಣಿಗೆ ಮಾನದಂಡ

  • ಸದಸ್ಯತ್ವ ನೋಂದಣಿ ನಮೂನೆಯಲ್ಲಿ ಗರಿಷ್ಠ 10 ಜನರಿಗೆ ಅವಕಾಶವಿದ್ದು, ಹೆಚ್ಚುವರಿ ನಮೂನೆ ಲಗತ್ತಿಸಿ ಮಾಹಿತಿ ಭರ್ತಿಗೆ ಅವಕಾಶ.
  • ಪರಿಶಿಷ್ಟ ಜಾತಿ/ಪಂಗಡ ಸದಸ್ಯರ ನೋಂದಣಿಗೆ ಜಾತಿ ಪ್ರಮಾಣಪತ್ರ ಕಡ್ಡಾಯ, ಶುಲ್ಕ ಸರ್ಕಾರದಿಂದ ಭರಿಸಲಾಗುತ್ತದೆ.
  • ಪಟ್ಟಣ ಸಹಕಾರ ಬ್ಯಾಂಕ್/ನಗರ ಪ್ರದೇಶದ ಇತರ ಸಹಕಾರ ಸಂಘಗಳ ಸದಸ್ಯರನ್ನು ಗ್ರಾಮೀಣ ಸದಸ್ಯರೆಂದು ಪರಿಗಣಿಸಲು ಅವಕಾಶವಿಲ್ಲ.
  • ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರು ಯಶಸ್ವಿನಿ ಕಾರ್ಡ್ ಪಡೆಯಲು ಅರ್ಹರಿದ್ದರೂ, ಯಾವುದಾದರು ಒಂದು ಯೋಜನೆಯಲ್ಲಿ ಚಿಕಿತ್ಸೆ ಪಡೆಯಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net