

ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಕಾಲೇಜಿನ ಉಪನ್ಯಾಸಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
೧೯ ವರ್ಷದ ಯುವತಿ ನೀಡಿದ ದೂರಿನನ್ವಯ ಖಾಸಗಿ ವಿವಿಯ ಉಪನ್ಯಾಸಕ ಹಾಗೂ ಎಚ್‌ಒಡಿ ಆದ ಸಂಜೀವ್ ಕುಮಾರ್ ಮಂಡಲ್(೪೫) ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ಸೆ.೨೫ ರಂದು ನನ್ನ ಕಾಲೇಜಿನ ಎಚ್‌ಒಡಿ ಆದ ಸಂಜೀವ್ ಕುಮಾರ್ ಮಂಡಲ್ ಅವರು, ಜಯನಗರದ ಇರುವ ಮನೆಯಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳು ಇರುವುದಾಗಿ ತಿಳಿಸಿ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅದರಂತೆ ನಾನು ಮಧ್ಯಾಹ ೧ ಗಂಟೆಯ ವೇಳೆ ಅವರ ಮನೆಗೆ ಹೋದೆ ನಂತರ ಅವರ ಮನೆಯಲ್ಲಿ ಯಾರು ಇಲ್ಲ ಎಂದು ತಿಳಿಸಿದ್ದರು. ಭಯಪಡಬೇಡ ನೀನು ಇಲ್ಲಿ ಸುರಕ್ಷಿತವಾಗಿ ಇದ್ದೀಯಾ ಎಂದು ಹೇಳಿ ಮನೆಯ ಒಳಗೆ ಕರೆದುಕೊಂಡು ಹೋದರು. ನಂತರ ಕುಡಿಯಲು ಮತ್ತು ತಿನ್ನಲು ಏನಾದರು ಬೇಕಾ? ಎಂದು ಕೇಳಿದ್ದರು. ಆಗ ನಾನು ಗಾಬರಿಯಿಂದ ಏನು ಬೇಡ ಎಂದು ಹೇಳಿದೆ. ಬಳಿಕ ಅವರ ಮನೆಯ ಸೋಾ ಮೇಲೆ ಕುಳಿತುಕೊಂಡಿದ್ದು, ನನ್ನ ಭುಜದ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದರು. ನಾನು ಆಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗ, ನಾನು ನಿನ್ನ ಹಾಜರಾತಿಯನ್ನು ಹೆಚ್ಚು ಮಾಡುತ್ತೇನೆ. ಜತೆಗೆ ನಿನಗೆ ಹೆಚ್ಚಿನ ಅಂಕಗಳನ್ನು ನೀಡುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಲು ಮುಂದಾದ್ದರು. ಈ ವೇಳೆ ನನಗೆ ಸ್ನೇಹಿತನಿಂದ ಕರೆ ಬಂದಿದ್ದು, ಆಗ ತುರ್ತು ಕೆಲಸವಿರುದಾಗಿ ಹೇಳಿ ಅಲ್ಲಿಂದ ಹೊರಗೆ ಬಂದೆ. ಹೀಗಾಗಿ ನನ್ನ ಜತೆಯಲ್ಲಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಸಂಜೀವ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.