

Railway gate : ರೈಲ್ವೇ ಗೇಟ್ನಲ್ಲಿಯೇ ಮುಖಾಮುಖಿಯಾದ ಎರಡು ಬಸ್ಗಳ ಚಾಲಕರು ಪರಸ್ಪರ ವಾಗ್ವಾದ ನಡೆಸಿ, ತಮ್ಮ ತಮ್ಮ ಬಸ್ ಅನ್ನು ಸೈಡಿಗೆ ಹಾಕಲು ನಿರಾಕರಿಸಿದ್ದಕ್ಕೆ ಅದೇ ಸಮಯದಲ್ಲಿ ಬಂದ ಎಕ್ಸ್ಪ್ರೆಸ್ ರೈಲು ಕೆಲಕಾಲ ಅಲ್ಲಿಯೇ ನಿಲ್ಲಬೇಕಾಯಿತು. ಇದರಿಂದ ಇನ್ನಿತರ ರೈಲುಗಳು ಸಹ ವಿಳಂಬವಾದವು.
ಅಂದಹಾಗೆ, ಈ ಅಸಾಮಾನ್ಯ ಘಟನೆ ಕಾಸರಗೋಡಿನ ತ್ರಿಕರಿಪುರ-ಪಯ್ಯನ್ನೂರು ಮಾರ್ಗದ ಬೀರಿಚೇರಿ ರೈಲ್ವೆ ಗೇಟ್ನಲ್ಲಿ ನಡೆದಿದೆ. ಮಂಗಳೂರು ಕಡೆಗೆ ಹೋಗುತ್ತಿದ್ದ ಕನ್ಯಾಕುಮಾರಿ-ದಿಬ್ರುಗಢ ವಿವೇಕ್ ಎಕ್ಸ್ಪ್ರೆಸ್ ಅನ್ನು ಕೆಲ ಕಾಲ ನಿಲ್ಲಿಸಬೇಕಾಯಿತು.
ನಿನ್ನೆ (ಏಪ್ರಿಲ್ 06) ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಚೆರುವತ್ತೂರಿನಿಂದ ಬರುತ್ತಿದ್ದ ಖಾಸಗಿ ಬಸ್, ರೈಲ್ವೆ ಗೇಟ್ ದಾಟುತ್ತಿದ್ದಾಗ, ಪಯ್ಯನ್ನೂರಿನಿಂದ ತ್ರಿಕರಿಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಇನ್ನೊಂದು ಬದಿಯಿಂದ ಅದರ ಕಡೆಗೆ ಬಂದಿತು. ಈ ವೇಳೆ ಒಂದು ಬಸ್ಸಿನ ಹಿಂಭಾಗ ಮಾತ್ರ ರೈಲು ಬರುತ್ತಿದ್ದ ಹಳಿಯ ಮೇಲೆಯೆ ಇತ್ತು. ಎಚ್ಚರಿಕೆ ನೀಡಿದ್ದರೂ, ಇಬ್ಬರು ಬಸ್ ಚಾಲಕರು ಜಗಳವಾಡುತ್ತಲೇ ಇದ್ದರು. ಇದರಿಂದ ರೈಲ್ವೇ ಗೇಟ್ ಮುಚ್ಚಲು ಸಾಧ್ಯವಾಗಲಿಲ್ಲ.
ಇದೇ ಸಮಯದಲ್ಲಿ ಬಂದ ಕನ್ಯಾಕುಮಾರಿ-ದಿಬ್ರುಗಢ ವಿವೇಕ್ ಎಕ್ಸ್ಪ್ರೆಸ್ ರೈಲಿನ ಲೋಕೋಪೈಲಟ್ಗೆ ಮಾಹಿತಿ ನೀಡಲಾಯಿತು. ತಕ್ಷಣ ರೈಲ್ವೆ ಗೇಟ್ನಿಂದ ಸುಮಾರು 500 ಮೀಟರ್ ದೂರದಲ್ಲಿ ರೈಲು ನಿಂತಿತು. ಈ ಸಮಯದಲ್ಲಿ, ಸ್ಥಳೀಯರು ಮತ್ತು ರೈಲ್ವೆ ಗೇಟ್ಕೀಪರ್ ಮಧ್ಯಪ್ರವೇಶಿಸಿ ಪಯ್ಯನ್ನೂರಿನಿಂದ ಬರುತ್ತಿದ್ದ ಬಸ್ ಅನ್ನು ಹಿಂದಕ್ಕೆ ತಳ್ಳಿದರು. ರೈಲು ಸುಮಾರು ಐದು ನಿಮಿಷಗಳ ಕಾಲ ಅಲ್ಲಿಯೇ ಇರಬೇಕಾಯಿತು. ಇದರಿಂದಾಗಿ, ಅದರ ನಂತರ ಬಂದ ರೈಲುಗಳು ಸಹ ವಿಳಂಬವಾದವು. (ಏಜೆನ್ಸೀಸ್)