ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಗೌಪ್ಯತೆ ಕಡ್ಡಾಯ: ಡಿಸಿ ಡಾ. ಆರ್.ಸೆಲ್ವಮಣಿ

Privacy is mandatory at scanning centers
ಸ್ಕ್ಯಾನಿಂಗ್ ಸೆಂಟರ್‌ಗಳ ವೈದ್ಯರು ಹಾಗೂ ತಂತ್ರಜ್ಞರೊಂದಿಗಿನ ಸಮಾಲೋಚನೆ ಸಭೆಯಲ್ಲಿ ಡಿಸಿ ಡಾ.ಆರ್.ಸೆಲ್ವಮಣಿ ಮಾತನಾಡಿದರು. ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ, ಐಎಂಎ ಅಧ್ಯಕ್ಷ ಅರುಣ್ ಇದ್ದರು.
Published on

ಶಿವಮೊಗ್ಗ: ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಗರ್ಭ ತಪಾಸಣೆಯ ನಂತರ ಅದರ ಗೌಪ್ಯತೆ ಕಾಪಾಡುತ್ತಿಲ್ಲ. ಇದರಿಂದ ಹೆಣ್ಣು ಶಿಶುವು ಜನಿಸುವ ಮೊದಲೇ ಗರ್ಭಪಾತವಾಗುತ್ತಿದೆ. ಹಾಗಾಗಿ ಲಿಂಗಾನುಪಾತದಲ್ಲಿ ಹೆಣ್ಣು ಶಿಶುಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ. ಇನ್ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳ ವೈದ್ಯರು ಹಾಗೂ ತಂತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿ, ಯಾವ ಉದ್ದೇಶಕ್ಕಾಗಿ ಯಂತ್ರವನ್ನು ಸಿದ್ಧಪಡಿಸಲಾಗಿದೆಯೋ, ಅದಕ್ಕಾಗಿ ಸರ್ಕಾರ ಕಾನೂನನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆಯೋ ಅದನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಕಾನೂನನ್ನು ನಿರ್ಲಕ್ಷಿಸಿ, ಭ್ರೂಣ ಪತ್ತೆಗೆ ಮುಂದಾದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.
ಲಿಂಗಾನುಪಾತ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಸವಪೂರ್ವದಲ್ಲಿ ಲಿಂಗನಿರ್ಧರಣೆ ಮಾಡದಂತೆ, ಗರ್ಭಪಾತವನ್ನು ನಿಯಂತ್ರಿಸಲು ಹಾಗೂ ಗೌಪ್ಯತೆ ಕಾಪಾಡುವಲ್ಲಿ ವೈದ್ಯರು ಗಮನಹರಿಸುವಂತೆ ಸರ್ಕಾರ ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು.
ಸ್ಕ್ಯಾನಿಂಗ್ ಸೆಂಟರ್‌ಗಳ ನಿರ್ವಾಹಕರು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕು. ಅಲ್ಲದೇ ಸ್ಕ್ಯಾನಿಂಗ್ ಯಂತ್ರ ಇರುವಲ್ಲಿ ಸಿಸಿಟಿವಿ ಕಣ್ಗಾವಲು ಹಾಕಬೇಕು. ಈವರೆಗೆ ಇಂತಹ ಪರೀಕ್ಷಾ ಘಟಕಗಳ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರೀಸಿಕೊಳ್ಳುವಂತೆ ಹಾಗೂ ಯಂತ್ರಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸದೇ ವಿಲೇವಾರಿ ಮಾಡದಂತೆ ಸೂಚಿಸಿದರು.
ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ, ಸ್ಕ್ಯಾನಿಂಗ್ ಸೆಂಟರ್‌ಗಳ ನಿರ್ವಾಹಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸಲಹೆ ನೀಡಿದರು. ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ನಾಗಲೀಕರ್, ಐಎಂಎ ಅಧ್ಯಕ್ಷ ಅರುಣ್ ಸೇರಿ ಸ್ಕಾನಿಂಗ್ ಸೆಂಟರ್‌ಗಳ ವೈದ್ಯರು, ತಂತ್ರಜ್ಞರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net