

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಅದ್ದೂರಿಯಾಗಿ ಜನ್ಮ ದಿನ ಆಚರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಬಿ.ದಯಾನಂದ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.
ಸರ್ಜಾಪುರದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಜೈಲಿನಲ್ಲಿ ತನ್ನ ಸಹಚರರ ಜತೆ ಹುಟ್ಟಹಬ್ಬ ಆಚರಿಸಿಕೊಂಡಿರುವ ವಿಡಿಯೋ ಮತ್ತು ಫೋಟೊಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ದಯಾನಂದ್, ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿರುವುದು ಮತ್ತು ವಿಡಿಯೊ ಪೋಸ್ಟ್ ಮಾಡಿರುವ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಡಿಐಜಿಗೆ ಸೂಚಿಸಿದ್ದಾರೆ.
ಎಡಿಜಿಪಿಗೆ ದೂರು:
ಕಳೆದ ಜನವರಿಯಲ್ಲಿ ಸರ್ಜಾಪುರದ ರೌಡಿ ವೆಂಕಟೇಶ್‌ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶ್ರೀನಿವಾಸ್ ಹಾಗೂ ಸಹಚರರು ಜೈಲು ಸೇರಿದ್ದರು. ಇದೀಗ ಶ್ರೀನಿವಾಸ್‌ಗೆ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ವಿಶೇಷ ಸೌಲಭ್ಯ ಕಲ್ಪಿಸಿರುವ ಆರೋಪ ಕೇಳಿ ಬಂದಿದೆೆ. ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋವನ್ನು ಸಾಗರ್ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಕೊಲೆಯಾದ ವೆಂಕಟೇಶ್ ಅವರ ಪತ್ನಿ ಎಡಿಜಿಪಿಗೆ ದೂರು ನೀಡಿದ್ದಾರೆ.