Haridwar District Jail: ನವರಾತ್ರಿ ಹಬ್ಬದ ಅಂಗವಾಗಿ ಜೈಲಿನಲ್ಲಿ ಆಯೋಜಿಸಿದ್ದ ರಾಮಲೀಲೆ ನಾಟಕದಲ್ಲಿ ವಾನರರ ವೇಷ ಧರಿಸಿದ್ದ ಇಬ್ಬರು ಕೈದಿಗಳು, ಸೀತೆಯನ್ನು ಹುಡುಕುವ ನೆಪದಲ್ಲಿ ಜೈಲಿನಿಂದಲೇ ಪರಾರಿಯಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಜೈಲಿನ ಸಿಬ್ಬಂದಿ ನಾಟಕ ವೀಕ್ಷಿಸುವುದರಲ್ಲಿ ನಿರತರಾಗಿದ್ದಾಗ, ಕೈದಿಗಳು 22 ಅಡಿ ಎತ್ತರದ ಕಾಂಪೌಂಡ್ ಗೋಡೆ ದಾಟಿ ಪರಾರಿಯಾಗಿದ್ದಾರೆ.
ಉತ್ತರಾಖಂಡದ ಹರಿದ್ವಾರದ ರೋಶನಾಬಾದ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನವರಾತ್ರಿ ಅಂಗವಾಗಿ ರಾಮಲೀಲೆ ನಾಟಕ ಆಯೋಜಿಸಲಾಗಿತ್ತು. ಈ ನಾಟಕದಲ್ಲಿ ಪಂಕಜ್ ಮತ್ತು ರಾಜ್ಕುಮಾರ್ ಎಂಬ ಇಬ್ಬರು ಕೈದಿಗಳು ಶ್ರೀರಾಮನ ವಾನರ ಸೇನೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಾಟಕದಲ್ಲಿ ಸೀತೆಯನ್ನು ಹುಡುಕುವ ದೃಶ್ಯ ಬಂದಾಗ, ಇಬ್ಬರೂ ಅದನ್ನೇ ಬಳಸಿಕೊಂಡು ವೇದಿಕೆಯಿಂದ ಹೊರನಡೆದಿದ್ದಾರೆ. ಈ ವೇಳೆ ಜೈಲಿನ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಾಟಕ ವೀಕ್ಷಿಸುವುದರಲ್ಲಿ ನಿರತರಾಗಿದ್ದರು. ಜೈಲಿನ ಆವರಣದಲ್ಲಿ ನಿರ್ಮಾಣ ಕಾಮಗಾರಿಗಾಗಿ ಇಡಲಾಗಿದ್ದ ಏಣಿಯನ್ನು ಬಳಸಿದ ಕೈದಿಗಳು, ಸುಮಾರು 22 ಅಡಿ ಎತ್ತರದ ಕಾಂಪೌಂಡ್ ಗೋಡೆ ದಾಟಿ ಪರಾರಿಯಾಗಿದ್ದಾರೆ.
ಪರಾರಿಯಾದ ಇಬ್ಬರು ಕೈದಿಗಳ ಪೈಕಿ ಪಂಕಜ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ, ರಾಜ್ಕುಮಾರ್ ಅಪಹರಣ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದನು.ರಾತ್ರಿ ಕೈದಿಗಳ ಎಣಿಕೆ ನಡೆಸಿದಾಗ ಇಬ್ಬರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರಿಗಾಗಿ ಹುಡುಕಾಟ ಆರಂಭಿಸಲಾಯಿತು.
ಕೈದಿಗಳು ಜೈಲಿನಿಂದ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಜೈಲಿನ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಯಿತು. ನಂತರದ ತನಿಖೆಯ ವೇಳೆ ಪರಾರಿಯಾಗಿದ್ದ ರಾಜ್ಕುಮಾರ್ನನ್ನು ಹರಿಯಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)