ಜೈಲುಹಕ್ಕಿಗಳಿಗೆ ಕಾಡುತ್ತಿದೆ ಕರೊನಾ ಖಿನ್ನತೆ!; ಜೈಲಿನಲ್ಲಿ ಮಾನಸಿಕ ವೇದನೆ, ನಿಮ್ಹಾನ್ಸ್​ನಿಂದ ಸರಳ ಸೂತ್ರದ ಕೈಪಿಡಿ ಸಿದ್ಧ

Jail
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಜಗತ್ತನ್ನೇ ಕಂಗೆಡಿಸಿರುವ ಕರೊನಾ ಮಾರಿ ಜೈಲೊಳಗಿರುವ ಕೈದಿಗಳನ್ನೂ ಮಾನಸಿಕವಾಗಿ ಹಿಂಡಲಾರಂಭಿಸಿದೆ. ಕೋವಿಡ್ ಲಾಕ್​ಡೌನ್​ನಿಂದಾಗಿ ಸಜಾಬಂಧಿಗಳು ಹಾಗೂ ಜೈಲು ಸಿಬ್ಬಂದಿ ಮಾನಸಿಕ ಖಿನ್ನತೆಗೆ ಜಾರಿರುವ ವಿಚಾರ ನಿಮ್ಹಾನ್ಸ್ ಸಮೀಕ್ಷೆಯಲ್ಲಿ ಬಯಲಾಗಿದೆ. ಮನೋವೇದನೆಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರದಿಂದ ದೂರವಿರಿಸಲು ನಿಮ್ಹಾನ್ಸ್ ಸಿದ್ಧಪಡಿಸಿರುವ ಸರಳಸೂತ್ರಗಳ ಕೈಪಿಡಿಯನ್ನು ದೇಶದ ಎಲ್ಲ ಜೈಲುಗಳಿಗೂ ಕಳುಹಿಸಿ ಅದರ ಮಾರ್ಗಸೂಚಿಯನ್ನು ಕೈದಿಗಳಿಗೆ ಕಡ್ಡಾಯವಾಗಿ ಹೇಳಿಕೊಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

‘ಡೀಲಿಂಗ್ ವಿತ್ ಮೆಂಟಲ್ ಹೆಲ್ತ್ ಇಶ್ಯೂಸ್ ಇನ್ ಪ್ರಿಸನರ್ಸ್ ಡೂರಿಂಗ್ ಕೋವಿಡ್-19’ ಮತ್ತು ‘ಡೀಲಿಂಗ್ ವಿತ್ ಮೆಂಟಲ್ ಹೆಲ್ತ್ ಇಶ್ಯೂಸ್ ಇನ್ ಪ್ರಿಸನ್ ಸ್ಟಾಫ್ ಡೂರಿಂಗ್ ಕೋವಿಡ್-19’ ಶೀರ್ಷಿಕೆಯ ಎರಡು ಕೈಪಿಡಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಸಿದ್ಧಪಡಿಸಿದ್ದು, ಅಯಾ ಸ್ಥಳೀಯ ಭಾಷೆಗಳಿಗೆ ಅನುವಾದಿಸಿ ಕೈದಿಗಳಿಗೆ ಹೇಳಿಕೊಡುವಂತೆ ಕಾರಾಗೃಹ ಇಲಾಖೆಗಳಿಗೆ ಕೇಂದ್ರ ಸೂಚಿಸಿದೆ. ಕೋವಿಡ್​ನಿಂದಾಗಿ ಪಾಶ್ಚಿಮಾತ್ಯ ದೇಶಗಳ ಕಾರಾಗೃಹಗಳಲ್ಲಿರುವ 10 ವಯಸ್ಕ ಕೈದಿಗಳ ಪೈಕಿ ನಾಲ್ವರಲ್ಲಿ ಆತಂಕ ಮತ್ತು ಖಿನ್ನತೆ ಲಕ್ಷಣಗಳಿರುವುದು ಕಂಡುಬಂದಿದೆ. ಭಾರತದ ಜೈಲುಗಳಲ್ಲಿರುವ ಕೈದಿಗಳಲ್ಲೂ ಖಿನ್ನತೆ ಹೆಚ್ಚುತ್ತಿದೆ. ಬೆಂಗಳೂರು ಕಾರಾಗೃಹ ಕೈದಿಗಳ ಮಾನಸಿಕ ಆರೋಗ್ಯ ಅಧ್ಯಯನದ ಪ್ರಕಾರ ಜೈಲಿನ ಒಟ್ಟಾರೆ ಕೈದಿಗಳ ಪೈಕಿ ಶೇ.80 ಸಜಾಬಂಧಿಗಳಲ್ಲಿ ಮಾನಸಿಕ ಅಸ್ವಸ್ಥತೆ ಹಾಗೂ ಮಾದಕ ವ್ಯಸನದ ಸಮಸ್ಯೆ ಇದೆ. ಮಾದಕ ದ್ರವ್ಯ ಬಳಕೆ ಹೊರತುಪಡಿಸಿದರೂ ಶೇ.27.6 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.

ಮಾಡಬೇಕಾದ್ದೇನು?

  • ಸೋಂಕಿಗೆ ಸಂಬಂಧಿಸಿದ ವಿಚಾರ ಅಥವಾ ಸುದ್ದಿಗಳನ್ನೇ ಪದೇಪದೆ ಅವರಿಗೆ ಹೇಳುವುದು ಬೇಡ
  • ಶೇ.2 ಅಥವಾ 3 ಕರೊನಾ ಸೋಂಕು, ಸಾವಿನ ಬಗ್ಗೆ ಮಾತನಾಡಿ, ಉಳಿದ ಶೇ.97ರಷ್ಟು ಗುಣಮುಖರಾದವರ ಬಗ್ಗೆ ಹೆಚ್ಚು ಹೇಳಬೇಕು
  • ಸಾಮಾನ್ಯ ವಿಚಾರವಾಗಿ ಮಾತು ಆರಂಭಿಸಿ, ಅವರ ಮನಸ್ಸಿನಲ್ಲಿರುವ ವಿಚಾರ ಹೇಳಿಕೊಳ್ಳಲು ಬಿಡಬೇಕು, ಕೈದಿಗಳಲ್ಲಿರುವ ಅನುಮಾನ, ಕುತೂಹಲದ ಬಗ್ಗೆ ತಿಳಿದು ಕೊಂಡು ಅದನ್ನು ಪರಿಹರಿಸಲು ಪ್ರಯತ್ನ ಪಡಬೇಕು

15 ನಿಮಿಷ ಯೋಗ: ಯಾವುದೇ ಸಂದರ್ಭದಲ್ಲಾದರೂ ಸರಿ ದಿನಕ್ಕೆ 2 ಬಾರಿ 15 ನಿಮಿಷ ಯೋಗ ಮಾಡಿದರೆ ಮಾನಸಿಕ ಖಿನ್ನತೆ ದೂರಾಗುತ್ತದೆ ಎಂದು ನಿಮ್ಹಾನ್ಸ್ ಕೈಪಿಡಿಯಲ್ಲಿ ಹೇಳಲಾಗಿದೆ. ಅರ್ಧ ಚಕ್ರಾಸನ, ಭ್ರಮರಿ, ನಾಡಿಶುದ್ಧಿ, ಭುಜ, ಕುತ್ತಿಗೆ ಮತ್ತು ಕೈ ತಿರುಗಿಸುವ ಯೋಗಾಸನಗಳನ್ನು 15 ನಿಮಿಷ ಮಾಡುವಂತೆ ಸೂಚಿಸಲಾಗಿದೆ.

ಆತ್ಮಹತ್ಯೆ ಲಕ್ಷಣಗಳೇನು?

  • ಇನ್ನೊಬ್ಬರಿಗೆ ಭಾರವಾಗಿ ಬದುಕುತ್ತಿರುವಂತೆ, ಜೀವಿಸಲು ಕಾರಣವೇ ಇಲ್ಲದವರಂತೆ, ಅಪಾಯ ಪರಿಸ್ಥಿತಿಗೆ ಸಿಲುಕಿರುವಂತೆ ಸದಾ ಮಾತನಾಡುವುದು
  • ವಿನಾಕಾರಣ ಕೆರಳುವುದು, ಸದಾ ಖಿನ್ನತೆಯಲ್ಲಿರುವುದು, ಯಾವುದರಲ್ಲೂ ಆಸಕ್ತಿ ಇಲ್ಲದ ಮನಃಸ್ಥಿತಿ ಹೊಂದಿರುವುದು.
  • ವಿದಾಯ ಹೇಳಲು ಹತ್ತಿರದವರನ್ನು ಕರೆಯುವುದು, ಆತ್ಮಹತ್ಯೆ ದಾರಿ ಹುಡುಕುವುದು, ಆಸ್ತಿ ಬೇರೆಯವರಿಗೆ ಕೊಡುವಂತೆ ವರ್ತಿಸುವುದು.

ಜೈಲಧಿಕಾರಿಗಳಿಗೆ ಸಲಹೆ

  • ಕೈದಿಗಳು ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು
  • ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಭೌತಿಕವಾಗಿ ಅಥವಾ ಟೆಲಿಕನ್ಸಲ್ಟೇಷನ್ ಮೂಲಕ ಮನೋವೈದ್ಯರು ಲಭ್ಯವಿರುವ ವ್ಯವಸ್ಥೆ
  • ಜೀವಕ್ಕೆ ಅಪಾಯವಿರುವ ಸಂದರ್ಭವನ್ನು ಹೊರತುಪಡಿಸಿ ಇನ್ನಾವುದೇ ಸಂದರ್ಭದಲ್ಲಿ ಮನೋ ಚಿಕಿತ್ಸಾ ಕ್ರಮಗಳನ್ನು ನಿಲ್ಲಿಸಬಾರದು
  • ಮಾನಸಿಕ ಉಲ್ಲಾಸ ಹಾಗೂ ಆತ್ಮಹತ್ಯೆ ನಿಯಂತ್ರಣ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು
  • ಎಲ್ಲ ಕೈದಿಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಹಾಗೂ ಕರೊನಾ ಪರೀಕ್ಷೆ ಮಾಡಿಸಬೇಕು.

ಖಿನ್ನತೆಗೆ ಕಾರಣ

  • ಲಾಕ್​ಡೌನ್ ಹಿನ್ನೆಲೆಯಲ್ಲಿ ಜೈಲಿಗೆ ಕುಟುಂಬಸ್ಥರು, ಪ್ರೀತಿಪಾತ್ರರು ಆಗ ಮಿಸಲು ನಿರ್ಬಂಧ ಹೇರಿರುವುದು
  • ಸೋಂಕು ಹರಡುತ್ತದೆಂಬ ಕಾರಣಕ್ಕೆ ಜೈಲಿನ ಸಹಕೈದಿಗಳ ಜತೆ ಹೆಚ್ಚು ಮಾತುಕತೆಗೆ ಅವಕಾಶ ಕಲ್ಪಿಸದಿರುವುದು
  • ಕೋರ್ಟ್ ಕಲಾಪಗಳು ಸ್ಥಗಿತಗೊಂಡಿರುವ ಕಾರಣ ಕಾನೂನು ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದು
  • ಕರೊನಾ ತಗುಲುವ ಆತಂಕ, ಸರಿಯಾಗಿ ಆರೋಗ್ಯ ಸೇವೆ ಗಳು ಲಭ್ಯವಾಗದೆಂಬ ಭಯ

ಖಿನ್ನತೆಯ ಲಕ್ಷಣ

  • ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸೋಂಕು ಹರಡುತ್ತದೆ ಎಂದು ಅತಿಯಾದ ಆತಂಕದಲ್ಲಿರುವುದು
  • ಸೋಂಕು, ಅದರ ಪರಿಣಾಮಗಳ ಬಗ್ಗೆ ಕುತೂಹಲ ಹೊಂದಿರುವುದು
  • ನಿದ್ರೆ ಬಾರದಿರುವುದು, ಹಸಿವು ಕಡಿಮೆಯಾಗುವುದು, ಸಣ್ಣಪುಟ್ಟ ವಿಚಾರಗಳಿಗೂ ಸಿಟ್ಟಾಗುವುದು ಅಥವಾ ಕೆರಳುವುದು
  • ಬಹುತೇಕ ಸಮಯ ಆಲಸ್ಯದಿಂದಿರುವುದು, ಪ್ರತನಿತ್ಯದ ಕೆಲಸ ಕಾರ್ಯಗಳ ಬಗ್ಗೆ ನಿರಾಸಕ್ತಿ, ಸುಸ್ತಾದಂತಿರುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net