ನ್ಯಾಯಾಂಗ ಇಲಾಖೆಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಿ: ಸುಪ್ರೀಂಕೊರ್ಟ್ ನ್ಯಾ. ಅರವಿಂದಕುಮಾರ್ ಸಲಹೆ

nyananga
Published on

ಬೆಂಗಳೂರು: ನ್ಯಾಯಾಂಗ ಸಿಬ್ಬಂದಿಯು ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಯಲ್ಲಿ ಒಂದಾಗಿದೆ. ಆರ್ಥಿಕವಾಗಿಯೂ ಸರ್ಕಾರಕ್ಕೆ ಲಾಭ ತಂದುಕೊಟ್ಟಿದೆ. ಈ ನಿಟ್ಟಿಲ್ಲಿ ನ್ಯಾಯಾಂಗ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ಇನ್ನೂ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ್ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 8ನೇ ರಾಜ್ಯಮಟ್ಟದ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಪೀಠದಲ್ಲಿನ ದಂಡ, ಪರೀಕ್ಷೆ ಸೇರಿ ಕಳೆದ ಮೂರು ವರ್ಷದಲ್ಲಿ 1,044 ಕೋಟಿ ರೂ.ವನ್ನು ಸರ್ಕಾರಕ್ಕೆ ಆದಾಯದ ಮೂಲದಲ್ಲಿ ಬಂದಿದೆ. ಇದರ ಅರ್ಧ ವೆಚ್ಚವನ್ನು ಕೂಡ ಸರ್ಕಾರ ಖರ್ಚು ಮಾಡುತ್ತಿಲ್ಲ ಎಂದರು.

ಬಿಡಿಎ, ಕೆಎಚ್‌ಬಿ ವತಿಯಿಂದ ನಿರ್ಮಿಸುವ ಬಡಾವಣೆ, ವಸತಿ ಸಮುಚ್ಚಯಗಳಲ್ಲಿ ನಿವೇಶನ, ವಸತಿಯನ್ನು ಇತರೆ ಸರ್ಕಾರಿ ನೌಕರರಿಗೆ ಒದಗಿಸುವಂತೆ ಮೀಸಲಿಡಬೇಕು. ಬಡ್ತಿ ನೀಡುವ ವಿಚಾರವಾಗಿ ವರ್ಷದಲ್ಲಿ ಎರಡು ಬಾರಿ ಸಭೆ ನಡೆಸಿ ಸಂಬಂಧಪಟ್ಟವರಿಗೆ ನ್ಯಾಯಯುತವಾಗಿ ದಕ್ಕಬೇಕಿರುವ ಬಡ್ತಿ ನೀಡುವಂತೆ ಸಲಹೆ ನೀಡಿದರು.

ಶ್ರೇಷ್ಠತೆ ಕಾಯ್ದುಕೊಳ್ಳಿ, ಬಾಸಿಸಂ ಬೇಡ:

ಪ್ರತಿಯೊಬ್ಬರೂ ತಮ್ಮ ಹಕ್ಕಿಗಾಗಿ ಹೋರಾಡುತ್ತಾರೆ, ಕರ್ತವ್ಯದ ಬಗ್ಗೆಯೂ ಯೋಚನೆ ಮಾಡಬೇಕು. ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಶ್ರೇಷ್ಠ ಕೆಲಸವನ್ನು ಮಾಡುವ ಗುಣವನ್ನು ಅಳವಡಿಸಿಕೊಳ್ಳಿ. ನೌಕರರಿಲ್ಲದೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಯಾರೊಬ್ಬರೂ ಬಾಸಿಸಂ ಮಾಡುವುದರಿಂದ ಗುಣಮಟ್ಟದ ಕೆಲಸ ಮಾಡಿಸಲು ಸಾಧ್ಯವಿಲ್ಲ. ವಿಶ್ವಾಸದಿಂದ ನಡೆದುಕೊಂಡು ನಡೆಸಿಕೊಂಡರೆ ಹೆಚ್ಚಿನ ಕೆಲಸವನ್ನು ತೆಗೆಯಬಹುದು ಎಂದು ಹೇಳಿದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಲ್ಲ ಇಲಾಖೆಯಲ್ಲಿಯೂ ಕೆಲಸದ ಒತ್ತಡವಿದೆ. ಒತ್ತಡದಿಂದ ಕೇವಲ ಕೆಲಸದ ದಕ್ಷತೆ ಮಾತ್ರ ಹಾಳಾಗುವುದಿಲ್ಲ. ಸಿಬ್ಬಂದಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆ. ಹೀಗಾಗಿ, ಒತ್ತಡಮುಕ್ತರಾಗಿ ಕಾರ್ಯನಿರ್ವಹಿಸಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹ ಆಲೋಚಿಸುವಂತೆ ನೌಕರರಿಗೆ ತಿಳಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮಾತನಾಡಿ, ವಾನರ ಸೇನೆಯಿಲ್ಲದೆ ರಾಮಾಯಣ ಇಲ್ಲ/ ನ್ಯಾಯಾಂಗ ಇಲಾಖೆ ಸಿಬ್ಬಂದಿ ಇಲ್ಲದೆ ನ್ಯಾಯಾಂಗ ವ್ಯವಸ್ಥೆ ಮುನ್ನಡೆಯಲ್ಲ. ಇಲಾಖೆಯಲ್ಲಿ ಸಿಬ್ಬಂದಿಯ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳಿದರು.

ನಮ್ಮ ಇಲಾಖೆ ಕೆಲಸವು ಮೃದುವಾಗಿ ನಡೆದುಕೊಂಡು ಹೋಗುವುದಿಲ್ಲ. ನ್ಯಾಯದೇವತೆ ಕೆಲಸದಲ್ಲಿ ಸಮಗ್ರತೆ ಮತ್ತು ವೈವಿಧ್ಯತೆ ಬಹಳ ಮುಖ್ಯ. ಆದ್ದರಿಂದ ‘ಪಾಪ ಭೀತಿ, ದೇವರ ಪ್ರೀತಿ ಮತ್ತು ಸಂಘ ನೀತಿ’ ಎಂಬ ಮೂರು ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಾರಂಭದ ಕೈಪಿಡಿ, ಧಾರವಾಡಪೀಠದ ನೌಕರ ರಚಿಸಿದ ಉಸಿರು ಗಂಧ ಒಳಗೊಂಡ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ನೌಕರರ ಬೇಡಿಕೆಗಳ ಅಹವಾಲನ್ನು ಸಹ ಸಲ್ಲಿಸಲಾಯಿತು.

ಈ ವೇಳೆ ಹೈಕೊರ್ಟ್ ನ್ಯಾ. ಸಿ. ಕಾವೇಶ್ವರ್ ರಾವ್, ನೌಕರರ ಸಂಘದ ಅಧ್ಯಕ್ಷ ಎಚ್.ವಿ. ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ್ ಉಪಸ್ಥಿತರಿದ್ದರು.

ನ್ಯಾಯಾಂಗ ಇಲಾಖೆಯಲ್ಲಿ ಶೇ.40 ಸಿಬ್ಬಂದಿ ಕೊರತೆ ಇದೆ. ಹೀಗಿದ್ದರೂ ಯಾವುದೇ ಕೆಲಸವು ವಿಳಂಬವಾಗದಂತೆ ನಡೆಸಿಕೊಂಡು ಹೋಗಲಾಗುತ್ತಿದೆ. ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಸಂಘದ ಮಟ್ಟದಲ್ಲಿ ಮಾಡಬಹುದಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ. - ಸಿ.ಎಸ್.ಷಡಕ್ಷರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net