

ಬೆಂಗಳೂರು: ಖನಿಜಾಂಶ ಆಧಾರದಲ್ಲಿ ಲಾಭಾಂಶ ನಿರ್ಧರಿಸಲಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸಲು ರಾಸಾಯನಿಕ ಮತ್ತು ಲೋಹಶಾಸ ಪ್ರಯೋಗಾಲಯಗಳ ನವೀಕರಣಕ್ಕೆ ಆದ್ಯತೆ ನೀಡಿ, ನಾಲ್ಕು ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಬೆಂಗಳೂರಿನಲ್ಲಿ ಇಲಾಖೆಯ ರಾಸಾಯನಿಕ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಕಚೇರಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲಾ ಕಚೇರಿಗಳಲ್ಲಿ ರಾಸಾಯನಿಕ ಪ್ರಯೋಗಾಲಯಗಳಿದ್ದು, ವಿಜಯನಗರ ಜಿಲ್ಲಾ ಕಚೇರಿಯಲ್ಲಿ ಹೊಸದಾಗಿ ಪ್ರಯೋಗಾಲಯ ಸ್ಥಾಪಿಸಲು ಕೆಎಂಇಆರ್‌ಸಿ ಅನುದಾನದಡಿ ಅನುಮೋದಿಸಲಾಗಿದೆ ಎಂದರು.
ಪ್ರಯೋಗಾಲಯಗಳು ಸೇರಿ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಸಾಯನಿಕ ಮತ್ತು ಲೋಹಶಾಸ ಪ್ರಯೋಗಾಲಯಗಳ ನವೀಕರಣಕ್ಕೆ 2.26 ಕೋಟಿ ರೂ., ಉಪಕರಣಗಳ ಖರೀದಿಗೆ ಎರಡು ಕೋಟಿ ರೂ. ಮೀಸಲಿಡಲಾಗಿದೆ. ಉತ್ತಮ ಅನ್ವೇಷಣೆಗಳು ಪ್ರಯೋಗಾಲಯಗಳಿಂದ ಹೊರ ಬರಲಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆಶಿಸಿದರು.
ಜಿಲ್ಲಾ ಕಚೇರಿಗಳ ಭೂವಿಜ್ಞಾನಿಗಳು ಸಂಗ್ರಹಿಸುವ ಖನಿಜ, ಅದಿರು ಮತ್ತು ಕಲ್ಲಿನ ಮಾದರಿಗಳನ್ನು ಶೇಕಡವಾರು ಖನಿಜಾಂಶಗಳಿಗೆ ರಾಸಾಯನಿಕ ವಿಶ್ಲೇಷಣೆ ಕೈಗೊಂಡು ವರದಿ ನೀಡಲಾಗುತ್ತಿದೆ. ಸೇವಾಸಿಂಧು ಸೇವೆಯಡಿ ಕೇಂದ್ರ ಕಚೇರಿಯ ಪ್ರಯೋಗಾಲಯದಲ್ಲಿ ಸಾರ್ವಜನಿಕರಿಂದಲೂ ವಿಶ್ಲೇಷಣಾ ಶುಲ್ಕ ಕಟ್ಟಿಸಿಕೊಂಡು ಖನಿಜಾಂಶಗಳ ವಿಶ್ಲೇಷಣಾ ವರದಿ ನೀಡಲಾಗುತ್ತಿದೆ ಎಂದರು.
ಪ್ರಯೋಗಾಲಯದಲ್ಲಿ ಇದುವರೆಗೆ ಸಾಂಪ್ರದಾಯಿಕ ವಿಧಾನಗಳಲ್ಲಿ ವಿಶ್ಲೇಷಣ ಕೈಗೊಂಡು ವರದಿಗಳನ್ನು ನೀಡಲಾಗುತ್ತಿತ್ತು. ಉತ್ತಮ ಪ್ರಯೋಗಾಲಯ ಅಭ್ಯಾಸಗಳನ್ವಯ ಆಧುನೀಕರಿಸಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎನ್‌ಎಂಇಟಿ ಅನುದಾನದಡಿ ಅತ್ಯಂತ ಸೂಕ್ಷ್ಮ, ಉಪಕರಣ ಮತ್ತು ಯಂತ್ರಗಳನ್ನು ಖರೀದಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.
ಈ ಕ್ರಮದಿಂದ ಇಲಾಖೆಯ ಖನಿಜಾನ್ವೇಷಣೆಯಲ್ಲಿ ಸಂಗ್ರಹಿಸಲಾಗುವ ವಿರಳ ಧಾತುಗಳು ಮಹತ್ವಪೂರ್ಣ ಮಾದರಿಗಳಿಂದ ಕಡಿಮೆ ಖನಿಜಾಂಶವನ್ನು ವಿಶ್ಲೇಷಣೆಗೆ ಒಳಪಡಿಸಬಹುದಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.