ಮೈಸೂರು-ಕೊಡಗು ಪ್ರವಾಸೋದ್ಯಮಕ್ಕೆ ಆದ್ಯತೆ: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ

Yaduveer-1
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಮೈಸೂರು: ಮೈಸೂರು-ಕೊಡಗು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿ, ಪರಂಪರೆ ರಕ್ಷಣೆ, ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕ್ಷೇತ್ರದಲ್ಲಿ 14ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದ ಜನತೆ ನಮಗೆ ಉತ್ತಮ ಬೆಂಬಲ ನೀಡಿದ್ದು, ಜತೆಗೆ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ ರಾಜ್ಯದ ಐವರಿಗೆ ಕೇಂದ್ರ ಸಚಿವ ಸ್ಥಾನವೂ ಸಿಕ್ಕಿದ್ದು, ಅಭಿವೃದ್ಧಿಗೆ ಇದು ಸಹಕಾರವಾಗುತ್ತದೆ. ಹಾಗಾಗಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರಲು ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಶ್ರಮ, ಮೈಸೂರು ರಾಜರ ಕೊಡುಗೆಯೊಂದಿಗೆ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿರುವ ಕೊಡುಗೆಯಿಂದ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ಮೈಸೂರು-ಕೊಡಗು ಪ್ರವಾಸೋದ್ಯಮ ಆಧಾರಿತ ಲೋಕಸಭಾ ಕ್ಷೇತ್ರವಾಗಿದ್ದು, ಇದಕ್ಕೆ ಪೂರಕವಾದ ಸಾಕಷ್ಟು ಯೋಜನೆ ರೂಪಿಸಬೇಕಿದೆ. ಜತೆಗೆ ಎರಡೂ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಸಹಕಾರವನ್ನು ಕೇಳುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಭಾಗದ ಎಲ್ಲರನ್ನು ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ ಎಂದರು.
ಪ್ರವಾಸೋದ್ಯಮ ದೃಷ್ಟಿಯಲ್ಲಿ ಮೈಸೂರಿಗೆ ಸಾಕಷ್ಟು ಯೋಜನೆ ರೂಪಿಸಬೇಕಿದೆ. ಅಂತೆಯೇ ಸಂಸದರಾಗಿದ್ದ ಪ್ರತಾಪಸಿಂಹ ಅವರ ಅವಧಿಯಲ್ಲಿ ಕೈಗೊಂಡಿದ್ದ ಕೆಲಸಗಳ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳ ಸಮಯ ನೋಡಿಕೊಂಡು ಪರಿಶೀಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net