ಪಾರದರ್ಶಕ ಚುನಾವಣೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

DSC_0187
Published on

ತುಮಕೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಯನ್ನು ನಿಷ್ಪಕ್ಷಪಾತ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಬುಧವಾರ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಸಂಬಂಧ ಎಲ್ಲ ತಾಲೂಕುಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತರಬೇತಿ ಪಡೆದು ಯಾವುದೇ ಲೋಪದೋಷಗಳಿಲ್ಲದಂತೆ ಹಾಗೂ ಯಾವುದೇ ಅಹಿತಕರ ಘಟನೆಗೆ ಆಸ್ಪದ ಮಾಡಿಕೊಡದಂತೆ ಚುನಾವಣೆಯನ್ನು ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಪರಿಷತ್ ಚುನಾವಣೆಯಲ್ಲಿ 6 ಮಂದಿ ಸ್ಪರ್ಧಿಸಿದ್ದು, ಒಟ್ಟು 5559 ಮಂದಿ ಮತ ಚಲಾವಣೆ ಮಾಡಲಿದ್ದಾರೆ. ಎಂದಿನಂತೆ ನಡೆಯುವ ಸಾರ್ವತ್ರಿಕ ಚುನಾವಣೆ ವಿಧಾನಕ್ಕಿಂತ ವಿಧಾನ ಪರಿಷತ್ ಚುನಾವಣಾ ವಿಧಾನ ಭಿನ್ನವಾಗಿದ್ದು, ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ಚುನಾವಣೆಯ ದಿನ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಪೂರ್ಣ ಸಮಯದವರೆಗೆ ಮತ ಕೇಂದ್ರಗಳಲ್ಲಿ ಹಾಜರಿದ್ದು, ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ನಿಯಮ ಉಲ್ಲಂಸಿದರೆ ಕಾನೂನು ಕ್ರಮ: ಗ್ರಾಪಂ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಯ ಚುನಾಯಿತ ಸದಸ್ಯರು ಮತದಾರರಾಗಿದ್ದು, ಪಾಲಿಕೆ ಸೇರಿ ಸರ್ಕಾರಿ ಕಚೇರಿಗಳು ಮತಕೇಂದ್ರಗಳಾಗಿರುತ್ತವೆ. ಪ್ರತೀ ಮತ ಕೇಂದ್ರಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಚುನಾವಣಾ ಸಮಿತಿಯ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ವೈ.ಎಸ್.ಪಾಟೀಲ ಎಚ್ಚರಿಸಿದರು.

ಮತಗಟ್ಟೆಗಳಲ್ಲಿ ಸಂಪೂರ್ಣ ಜವಾಬ್ದಾರಿ ಹಾಗೂ ಅಧಿಕಾರವನ್ನು ಪ್ರಿಸೈಡಿಂಗ್ ಅಧಿಕಾರಿ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ವಹಿಸಲಾಗಿದೆ. ಅಲ್ಲಿನ ಪಿಡಿಒ ಅಥವಾ ಕಾರ್ಯದರ್ಶಿಗಳು ಮತದಾರರನ್ನು ಗುರುತಿಸುವ ಅಧಿಕಾರ ಹೊಂದಿರುತ್ತಾರೆ. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಮತದಾನ ಪ್ರಕ್ರಿಯೆ ನಡೆಸಬೇಕು ಎಂದರು.

ತರಬೇತಿಯಲ್ಲಿ ಮಾಹಿತಿ: ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪೂರ್ವ ಹಾಗೂ ಮತದಾನ ನಂತರದ ಮತಗಟ್ಟೆಗಳ ಸಿದ್ಧತೆ, ನಮೂನೆಗಳ ಸಿದ್ಧಪಡಿಕೆ, ಸಹಿ-ಮೊಹರು, ಮತಪೆಟ್ಟಿಗೆಗಳ ಸೀಲಿಂಗ್, ಸಿಂಧು ಮತ್ತು ಅಸಿಂಧು ಮತಗಳು, ಮತದಾರರೊಂದಿಗೆ ಬರುವ ಅನುಮತಿಸಿದ ವ್ಯಕ್ತಿಗಳ ಹಕ್ಕುಗಳು, ಪಿಆರ್‌ಒ ಹಾಗೂ ಎಪಿಆರ್‌ಒ ಅಧಿಕಾರಿಗಳ ಜವಾಬ್ದಾರಿ ಸೇರಿ ಸಂಪೂರ್ಣ ಮಾಹಿತಿಯನ್ನು ತರಬೇತಿ ವೇಳೆ ನೀಡಲಾಯಿತು. ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಯಟ್ ಪ್ರಿನ್ಸಿಪಲ್ ಮಂಜುನಾಥ್, ಮುಖ್ಯತರಬೇತುದಾರ ರಂಗಧಾಮಯ್ಯ, ಎಲ್ಲ ತಾಲೂಕಿನ ಪ್ರಿಸೈಡಿಂಗ್ ಹಾಗೂ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net