ಸಂಪಾದಕೀಯ | ಸುರಕ್ಷತೆಗೆ ಆದ್ಯತೆ ಕೊಡಿ

photo (4)
Published on

ಬೆಂಗಳೂರಿನಲ್ಲಿ ಕಳೆದೆರಡು ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಎರಡು ಅಗ್ನಿ ಅವಘಡಗಳು ಸಂಭವಿಸಿ, ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿವೆ. ವಿಲ್ಸನ್ ಗಾರ್ಡನ್​ನ ಚಿನ್ನಯ್ಯನಪಾಳ್ಯದಲ್ಲಿ ಸಿಲಿಂಡರ್ ಸ್ಪೋಟಕ್ಕೆ ಒಬ್ಬ ಬಾಲಕ ಬಲಿಯಾಗಿ 9 ಜನ ಗಾಯಗೊಂಡಿದ್ದರೆ, ನಗರ್ತಪೇಟೆಯಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇವೆರಡೂ ಕಿಕ್ಕಿರಿದ ವಾಸಸ್ಥಳಗಳಾಗಿದ್ದು, ರಕ್ಷಣಾ ಕಾರ್ಯಕ್ಕೆ ಬಂದ ಸಿಬ್ಬಂದಿಯ ವಾಹನಗಳು ಕೂಡ ಒಳಗೆ ಹೋಗುವಷ್ಟು ಜಾಗ ಇರಲಿಲ್ಲ. ಅಷ್ಟು ಚಿಕ್ಕ ವಿಸ್ತೀರ್ಣದ ಓಣಿಗಳಿವು. ನಗರ್ತಪೇಟೆಯಲ್ಲಂತೂ ಸುಮಾರು ಒಂದೂವರೆ ಕಿಲೋಮೀಟರ್​ನಷ್ಟು ದೂರದಿಂದಲೇ ಬೆಂಕಿ ನಂದಿಸುವ ಕಾರ್ಯ ಮಾಡಬೇಕಾದ ಅನಿವಾರ್ಯತೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಎದುರಾಗಿತ್ತು.

ಹಾಗೆಂದು ಇಲ್ಲಿರುವಂಥವು ಸಣ್ಣ ಕಟ್ಟಡಗಳಲ್ಲ. 3-4 ಅಂತಸ್ತಿನ ಕಟ್ಟಡಗಳು. ಒಂದೊಂದರಲ್ಲೂ ಹತ್ತಿಪ್ಪತ್ತು ಮನೆಗಳು ಮತ್ತು ಅಂಗಡಿಗಳು. ವ್ಯಾಪಾರಕ್ಕೆ ಬಂದು ಹೋಗುವ ಜನರೂ ಕಡಿಮೆಯೇನಿಲ್ಲ. ಇಷ್ಟೆಲ್ಲ ಜನಸಂದಣಿ ಇದ್ದರೂ ಇಲ್ಲಿ ಅಗ್ನಿ ಅವಘಡ ಅಥವಾ ಮತ್ಯಾವುದೇ ದುರ್ಘಟನೆ ಸಂಭವಿಸಿದಾಗ ಅಗತ್ಯಬೀಳುವ ಯಾವುದೇ ಮುನ್ನೆಚ್ಚರಿಕೆ ವ್ಯವಸ್ಥೆಯೂ ಇರಲಿಲ್ಲ. ಸುರಕ್ಷತಾ ವ್ಯವಸ್ಥೆಯ ಕೊರತೆಯಿಂದಾಗಿಯೇ ಈ ದುರಂತಗಳ ತೀವ್ರತೆ ಜಾಸ್ತಿ ಆಯಿತು ಎಂಬುದು ಗಮನಿಸಬೇಕಾದ ಅಂಶ. ಕಟ್ಟಡಗಳಿಗೆ ಮಾಲೀಕರು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯದೇ ನಿಯಮ ಉಲ್ಲಂಘಿಸುವುದು ಸರ್ವೆಸಾಮಾನ್ಯವಾಗಿದೆ. ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಡ ನಿರ್ವಿುಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಹಾಗಾಗಿ ದುರ್ಘಟನೆಗಳಿಗೆ ಸಾರ್ವಜನಿಕರೂ ಜವಾಬ್ದಾರರಾಗುತ್ತಾರೆ.

ಬಾಡಿಗೆಯ ಆಸೆಗಾಗಿ ಕಟ್ಟಡಗಳನ್ನು ನಿರ್ವಿುಸುವವರಿಗೆ ಅಲ್ಲಿ ವಾಸಿಸುವ ಬಾಡಿಗೆದಾರರ ಸುರಕ್ಷತೆ ಬಗ್ಗೆ ಚಿಂತೆಯೇ ಇರುವುದಿಲ್ಲ. ಘಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸ್ಥಳೀಯ ಆಡಳಿತ, ನಂತರ ಎಂದಿನಂತೆ ನಿದ್ರೆಗೆ ಜಾರುವುದು ಇಡೀ ವ್ಯವಸ್ಥೆಯ ಅಣಕ. ಇಂತಹ ಜನನಿಬಿಡ ಸ್ಥಳಗಳು ಬೆಂಗಳೂರಷ್ಟೇ ಅಲ್ಲ, ರಾಜ್ಯದ ಎಲ್ಲ ಕಡೆಗಳಲ್ಲಿಯೂ ಇವೆ. ಅಲ್ಲಿಯೂ ಇದೇ ರೀತಿಯ ಸವಾಲುಗಳಿವೆ. ಅಗ್ನಿ ಅವಘಡ ಸಂಭವಿಸಿದಾಗ ಇರಬೇಕಾದ ಸುರಕ್ಷತಾ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುದನ್ನು ನಿಯಮಿತವಾಗಿ ಖಾತ್ರಿಪಡಿಸಿಕೊಳ್ಳುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜವಾಬ್ದಾರಿ. ಅವರು ಈ ಘಟನೆಗಳಿಂದ ಪಾಠ ಕಲಿಯಬೇಕು.

ಕಟ್ಟಡಗಳಲ್ಲಿ ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನ ಮಾರ್ಗಗಳು ಮತ್ತು ವಿದ್ಯುತ್ ವ್ಯವಸ್ಥೆಯ ನಿಯಮಿತ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ಕಿಕ್ಕಿರಿದ ವಾಸಸ್ಥಳಗಳಲ್ಲಿ ಅಗ್ನಿಶಾಮಕ ವಾಹನಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ರಸ್ತೆ ವಿನ್ಯಾಸ ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net