

ತಿ.ನರಸೀಪುರ: ಸಂಘ, ಸಂಸ್ಥೆಗಳ ಪುರಸ್ಕಾರಕ್ಕೆ ಭಾಜನರಾಗುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಂಡು ಹುಟ್ಟಿದ ಸಮುದಾಯ ಮತ್ತು ಬದುಕುವ ಸಮಾಜಕ್ಕೂ ಆಸ್ತಿಯಾಗಬೇಕು ಎಂದು ತಾಲೂಕು ನಾಯಕರ ಸಂಘದ ಕಾರ್ಯದರ್ಶಿ ಹಾಗೂ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಶ್ರೀರಾಂಪುರದಲ್ಲಿರುವ ತಾಲೂಕು ನಾಯಕರ ಸಂಘದ ಆವರಣದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಉತ್ತೀರ್ಣರಾದ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ನಾಯಕರ ಸಂಘ ಹಾಗೂ ನಾಯಕ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಮತ್ತು ಮಧ್ಯಮ ವರ್ಗದ ಹಿನ್ನೆಲೆಯಿಂದಲೇ ಬೆಳೆದು ಬರುವ ನಾಯಕ ಸಮುದಾಯದ ಪ್ರತಿಭಾವಂತ ಮಕ್ಕಳು ಸಮುದಾಯದ ಅಭಿವೃದ್ಧಿಗೂ ಆದ್ಯತೆ ಕೊಟ್ಟು ಸಮಾಜಕ್ಕೂ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಪೈಪೋಟಿ ಹೆಚ್ಚುತ್ತಿರುವುದರಿಂದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಕ್ಷೇತ್ರವೂ ಸ್ಪರ್ಧಾತ್ಮಕವಾಗುತ್ತಿವೆ. ಹಾಗಾಗಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಹೆಚ್ಚಿನ ಶಿಕ್ಷಣವನ್ನು ಪಾಲಕರು ನೀಡಬೇಕು. ವೈಜ್ಞಾನಿಕ ವಿಚಾರ ಆಧಾರಿತ ಕಲಿಕೆಗೂ ಮಕ್ಕಳು ಗಮನವನ್ನು ನೀಡಬೇಕು. ಸರ್ಕಾರ ಮತ್ತು ಸಂಘ ಸಂಸ್ಥೆಗಳು ನೀಡುವ ಶೈಕ್ಷಣಿಕ ನೆರವನ್ನು ಪಡೆದುಕೊಂಡು ಕಲಿಕೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅನುತ್ತೀರ್ಣಗೊಂಡವರಿಗೂ ಸಿಗಲಿ ಪ್ರೋತ್ಸಾಹ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮಾದರಿಯಲ್ಲಿಯೇ ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳನ್ನು ಮರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ತರಬೇತಿಗಳನ್ನು ಕೊಟ್ಟು ಅವರನ್ನು ಪ್ರೋತ್ಸಾಹಿಸೋಣ. ಈಗಿನ ಶೈಕ್ಷಣಿಕ ವರ್ಷದಿಂದಲೇ ತಾಲೂಕಿನಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ಶೈಕ್ಷಣಿಕ ನೆರವು ಕಲ್ಪಿಸಿ, ಕಲಿಕೆಯಿಂದ ವಂಚಿತರಾಗುವುದನ್ನು ನಾವೆಲ್ಲರೂ ತಡೆಗಟ್ಟೋಣ ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಮಂಜುನಾಥನ್, ವಾಲ್ಮೀಕಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಡಾ.ಎಂ.ಮಹದೇವಯ್ಯ, ನಾಯಕ ಸಂಘದ ಅಧ್ಯಕ್ಷ ಚಿಕ್ಕಯ್ಯ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ 22 ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ 31 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾಯಕ ನೌಕರರ ಸಂಘದ ಅಧ್ಯಕ್ಷ ಆರ್.ರಾಜು, ಕಾರ್ಯದರ್ಶಿ ಶಾಂತರಾಜು, ತಾಲೂಕು ನಾಯಕರ ಸಂಘದ ಉಪಾಧ್ಯಕ್ಷ ಆಲಗೂಡು ನಾಗರಾಜು, ಖಜಾಂಚಿ ಪಿ.ಶಶಿಧರ, ನಿರ್ದೇಶಕರಾದ ಮರಾಪ್ಪಾಜಿ, ಗೋವಿಂದರಾಜು, ಬಸವರಾಜು, ಮೂಗೂರು ಮರಿಸ್ವಾಮಿ, ಹೆಮ್ಮಿಗೆ ಹೊನ್ನಯ್ಯ, ನಾಗರಾಜು, ಶಾಂತರಾಜು ಮತ್ತಿತರರಿದ್ದರು.