

ಪರಮಾತ್ಮನು ಅಮೃತಸ್ವರೂಪ. ಅವನು ಯಾವ ಬದಲಾವಣೆಗೂ ಸಿಗುವುದಿಲ್ಲ. ಅವನು ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತಾನೆ. ಅವನೇ ಪ್ರಮುಖ. ಅವನು ಜೀವರನ್ನು ಆಳುತ್ತಾನೆ. ಈ ಬ್ರಹ್ಮಾಂಡವೆಲ್ಲ ಪರಮಾತ್ಮನ ಕೈಯಲ್ಲೇ ಇದೆ. ಇಲ್ಲಿ ಪ್ರತಿಯೊಂದು ವಸ್ತುವು ಅವನ ಆಣತಿಯನ್ನೇ ಪಾಲಿಸುತ್ತದೆ. ಅವನ ಬಳಿ ಅಣು-ವಿಭು ಎಲ್ಲವೂ ಬಾಗಿ ನಡೆಯಬೇಕು. ನಾವು ಯಾವುದನ್ನು ಪ್ರಕೃತಿಧರ್ಮ ಎನ್ನುತ್ತೇವೆಯೋ ಅದನ್ನು ಕೊಟ್ಟವನು ಅವನೇ. ಜೀವದ ಒಳಗೆ ಅಂತರ್ಯಾಮಿಯಂತೆ ನಿಂತು ಅವರನ್ನು ಅವರವರ ಕರ್ಮಕ್ಕೆ ಅನುಸಾರವಾಗಿ ಆಳುತ್ತಿರುತ್ತಾನೆ. ಇದೆಲ್ಲವೂ ‘ಪರಮಾತ್ಮಪದ’ವನ್ನು ಸೂಚಿಸುತ್ತದೆ. ಮಹಲಿಂಗರಂಗನ ಮಾತನ್ನು ಕೇಳಿ:
ತೋರಿಸುವದೆಲ್ಲವನು ತನ್ನೊಳು;
ತೋರದಡಗಿದೊಡಡಗಿತೆಂಬ ವಿ
ಚಾರವೇನೂ ತೋರದೇ ಸ್ಥಿಮಿತಾಂಬುಧಿಯವೋಲು |
ಮೀರಿ ಮಿಕ್ಕಿಹ ಸತ್ಯಸಂವಿದ
ಪಾರಪರಮಾನಂದ ಸಹಜಾ
ಕಾರವದು ಪರಮಾತ್ಮಪದವೆಂದರಿತುಕೋ ಎಂದ || (7.13)
ನಾವು ತಿಳಿಯಬೇಕಾದ ಕರಣದ ಎಲ್ಲ ವಿಷಯಗಳು ಜ್ಞಾನಗಳು ಎನಿಸುತ್ತವೆ. ಅವುಗಳನ್ನು ಸರಿಯಾಗಿ ತಿಳಿಯುವುದೇ ಜ್ಞಾತೃತ್ವ - ಎಂದೆನಿಸಿಕೊಳ್ಳುತ್ತದೆ. ಇದು ಮೂರುದಲಗಳನ್ನು ಉಳ್ಳದ್ದು. ಇಂಥ ಅವಸ್ಥೆ ಇಲ್ಲವಾದುದೇ ಪರಮಾತ್ಮಪದ. ಮಹಲಿಂಗರಂಗನು ಮುಂದುವರಿಸಿ ಹೇಳುವ ಮಾತಿದು:
ಒತ್ತರದ ನಿದ್ರೆಯೊಳು ನಿಜಸುಖ
ವ್ಯಕ್ತವಾಗಿಯೆ ತೋರುತಿರಲದ
ಮರ್ತ್ಯ ‘ಸುಖಮಸ್ವಾಪ್ಯಮಹ’ಮಿಂತೆಂದು ಪೇಳುವನು; |
ಪ್ರತ್ಯಭಿಜ್ಞೆಯೆನಿಪ್ಪುದಾ ಸುಖ;
ನಿತ್ಯನಿರುಪಾಧಿಕವದಾಗಿಹ
ಸತ್ಯಸಹಜಾನಂದವದು ಪರಮಾತ್ಮಪದವೆಂದ || (7.15)
ಈ ಪದ್ಯದ ಆಂತರ್ಯವನ್ನು ತಿಳಿಯುವ ಯತ್ನವನ್ನು ಮಾಡೋಣ: ‘‘ಗಾಢವಾದ ನಿದ್ರೆಯಲ್ಲಿ ನಿಜಸುಖವು ವ್ಯಕ್ತವಾಗಿಯೇ ತೋರುತ್ತದೆ. ಅದು ಸತ್ಯ. ಆಗ ಗಾಢನಿದ್ರೆಯಿಂದ ಎದ್ದವನು ‘ಸುಖಮಸ್ವಾಪ್ಯಮಹಂ’ ಎಂದು ಹೇಳುವನು. ಆ ಸುಖವೇ ಪ್ರತ್ಯಭಿಜ್ಞೆ. ಇದು ನಿತ್ಯವೂ ನಿರುಪಾಧಿಕವೂ ಆಗಿದ್ದು ಸತ್ಯಸಹಜಾನಂದದ ಪರಮಾತ್ಮಪದ ಎಂದು ತಿಳಿಯಬೇಕು.’’
ಈ ಪದ್ಯದ ಪೂರ್ವಾರ್ಧದಲ್ಲಿ ಬಂದಿರುವ ‘ಸುಖಮಸ್ವಾಪ್ಯಮಹಂ’ ಎಂಬ ಮಾತು ಶಾಂಕರಭಾಷ್ಯದಲ್ಲಿ ಬಂದಿದೆ. ಇದು ‘ಆತ್ಮದರ್ಶನ’ದ ಕುರುಹಾಗಿ ನಿರೂಪಿತವಾಗಿದೆ. ಈ ಮಾತಿಗೆ ‘‘ನಾನು ಸುಖವಾಗಿ ನಿದ್ರೆ ಮಾಡಿದೆನು’’ ಎಂದು ಅರ್ಥ. ‘ಪ್ರತ್ಯಭಿಜ್ಞೆ’ ಎಂದರೆ: ಹಿಂದೊಮ್ಮೆ ನೋಡಿದ್ದನ್ನು ನಡುವೆ ಮರೆತಿದ್ದು ಆಮೇಲೆ ಗುರುತಿಸುವುದಕ್ಕೆ ಪ್ರತ್ಯಭಿಜ್ಞೆ ಎಂದು ಕರೆಯುತ್ತಾರೆ. ಇಲ್ಲಿ ಮಹಲಿಂಗರಂಗನು ನಿದ್ರೆಯಲ್ಲಿ ಅನುಭವಕ್ಕೆ ಬಂದ ಸುಖದ ನೆನಪನ್ನು ಪ್ರತ್ಯಭಿಜ್ಞೆಯೆಂದು ಕರೆದಿದ್ದಾನೆ. ಮುಂದಿನ ಮಹಲಿಂಗರಂಗನ ಮಾತಿದು:
ಕತ್ತಲೆಗೆ ಸೈರಿಸದೆ ತೇಜವ
ನರ್ಥಿಸುವ ನಯನಗಳ ತೇಜೋ
ಮೂರ್ತಿಯೆಂತಂತಖಿಳದುಃಖವ ಸೈರಿಸದೆ; ಸುಖವ |
ಪ್ರಾರ್ಥಿಸುವ ನಿಜವಾದ ನಿರುಪಮ
ವಸ್ತುವೇ ಸುಖಮಯವದೆನಲೇ
ಕತ್ವವದು ಪರಮಾತ್ಮಪದವೆಂದರಿತುಕೋ ಎಂದ || (7.16)
ಈ ಪದ್ಯದ ಅರ್ಥ ಇಷ್ಟು: ‘‘ಕಣ್ಣುಗಳು ಕತ್ತಲೆಯನ್ನು ಸಹಿಸಿಕೊಳ್ಳದೆ ಬೆಳಕನ್ನು ಅಪೇಕ್ಷಿಸುತ್ತವೆ. ಅದರಂತೆ ಆತ್ಮನು ದುಃಖವನ್ನು ಅನುಭವಿಸಲಾರದೆ ಸುಖವನ್ನು ಬಯಸುವ ಶ್ರೇಷ್ಠವಾದ ವಸ್ತುವೇ ಸುಖಮಯವಾಗಿದೆ. ಆ ಏಕತ್ವವೇ ಪರಮಾತ್ಮಪದ ಎಂದು ತಿಳಿದುಕೊಳ್ಳಬೇಕು.’’ ಈ ಪದ್ಯದ ಪೂರ್ವಾರ್ಧದಲ್ಲಿ ‘‘ತೇಜೋಮೂರ್ತಿಯು + ಎಂತೊ + ಅಂತು + ಅಖಿಳ’’ ಎಂದು ಬಿಡಿಸಿಕೊಳ್ಳಬೇಕು. ಪದ್ಯದ ಉತ್ತರಾರ್ಧದಲ್ಲಿ ‘‘ಸುಖಮಯವದು + ಎನಲು + ಏಕತ್ವವು + ಅದು’’ ಎಂದು ಬಿಡಿಸಿಕೊಂಡು ಓದಬೇಕು. ನಮ್ಮ ಕಣ್ಣುಗಳು ಗಾಢವಾದ ಕತ್ತಲೆಯನ್ನು ಅಪೇಕ್ಷಿಸುವುದಿಲ್ಲ. ಅವು ಕೂಡಲೇ ಬೆಳಕನ್ನು ಅಪೇಕ್ಷಿಸುತ್ತವೆ. ಇದು ನಮ್ಮನಮ್ಮ ದಿನದಿನದ ಅನುಭವ. ಇಂಥ ವಾಸ್ತವ ಅನುಭವದ ಮೂಲಕ ‘ಪರಮಾತ್ಮಪದ’ದ ನೆಲೆಯನ್ನು ಮಹಲಿಂಗರಂಗ ನಮಗೆ ತಿಳಿಸಿಕೊಡುತ್ತಿದ್ದಾನೆ.