ಬಹು ವ್ಯಕ್ತಿತ್ವದಲ್ಲಿದೆ ಒಳಿತಿನ ತತ್ವ

sdfsfsf
Published on
|ಡಾ.ಎನ್.ಕೆ. ಕಾಳಪ್ಪನವರ್

ಪ್ರಸ್ತುತ ಕಾಲಮಾನದ ಒಬ್ಬ ಪ್ರಸಿದ್ಧ ವೈದ್ಯ ಕೇವಲ ಒಂದು ರೋಗಿಯ ಪಾಲಿಗೆ ‘ವೈದ್ಯೋ ನಾರಾಯಣ ಹರಿ’ ಎಂಬ ನುಡಿಯಂತೆ ಚಿಕಿತ್ಸೆ ನೀಡುವ, ಕಾಲಕ್ಕೆ ತಕ್ಕಂತೆ ವೈದ್ಯಕೀಯ ಉಪಚಾರ ಕೊಡುವ ವೈದ್ಯನಾಗಿರದೆ, ಆತ ಅನೇಕ ರೂಪದಲ್ಲಿ ಸಾರ್ವಜನಿಕರ ನಿತ್ಯ ಬದುಕಿನಲ್ಲಿ ಪಾತ್ರ ವಹಿಸುವವರಾಗಿರಬೇಕು.

ವೈದ್ಯನು ಸಾರ್ವಜನಿಕ ಬದುಕಿನಲ್ಲಿ ಶಿಕ್ಷಕನ ಪಾತ್ರ ವಹಿಸಬೇಕು. ಶಿಕ್ಷಕನ ಪಾತ್ರ ಅಪ್ರತಿಮವಾದದ್ದು. ಅಲ್ಲದೆ ಅದಕ್ಕಿರುವ ಪರಿವರ್ತನೆಗೊಳಿಸುವ ಶಕ್ತಿ ಸಮಾಜದಲ್ಲಿ ಇನ್ನೊಂದು ವ್ಯಕ್ತಿಗಿಲ್ಲ ಎಂದರೆ ತಪ್ಪಾಗಲಾರದು. ಒಬ್ಬ ಜವಾಬ್ದಾರಿಯುತ ವೈದ್ಯ ತನ್ನ ನಿತ್ಯ ಜೀವನದಲ್ಲಿ ಬರುವ ಎಲ್ಲ ರೋಗಿಗಳನ್ನು ಅವರ ಸಂಬಂಧಿಕರಾಗಿ, ಅವರವರ ಕಾಯಿಲೆಗಳನ್ನು ಸರಳವಾಗಿ ಮನವರಿಕೆ ಮಾಡುವ ಮೂಲಕ ಸಂಪೂರ್ಣ ತಿಳಿವಳಿಕೆ ನೀಡುವಂತಾಗಬೇಕು. ಏಕೆಂದರೆ ವ್ಯಕ್ತಿಯ ಕಾಯಿಲೆಗಳನ್ನು ಮಾತ್ರ ಗುಣಪಡಿಸುವ ಔಷಧವನ್ನು ನೀಡಿದರೆ ವ್ಯಕ್ತಿಯೂ ಅದನ್ನು ತೆಗೆದುಕೊಂಡು ಗುಣಮುಖವಾಗಬಹುದು.

ಆದರೆ, ನಂತರ ಅದೇ ವ್ಯಕ್ತಿ ಮತ್ತೆ ತನ್ನ ಜೀವನ ಶೈಲಿಯಿಂದ ಆ ಕಾಯಿಲೆಗೆ ತುತ್ತಾಗಬಹುದು ಅಥವಾ ಅದರ ತೀವ್ರತೆಯ ಗುಣಗಳಿಂದ ಆರೋಗ್ಯ ಕ್ಷೀಣಿಸಬಹುದು. ಅಲ್ಲದೆ ಸಮಾಜದಲ್ಲಿ ಆ ಕಾಯಿಲೆ ಹರಡುವಿಕೆಯಲ್ಲಿ ಮುಖ್ಯ ಪಾತ್ರದಾರನಾಗಬಹುದು. ಆದರೆ, ಒಬ್ಬ ಜವಾಬ್ದಾರಿಯುತ ವೈದ್ಯ ತಾನು ಶಿಕ್ಷಕನಂತೆ ಕಲಿಸುವ ಕಲೆಯೊಂದಿದ್ದರೆ ಆತ ರೋಗಿಗೆ ಹಾಗೂ ರೋಗಿಯ ಸಂಬಂಧಿಕರಿಗೆ ಕಾಯಿಲೆಯ ಸಂಪೂರ್ಣ ರೋಗ ಲಕ್ಷಣ, ತೀವ್ರತೆಯಿಂದಾಗುವ ದುಷ್ಪರಿಣಾಮಗಳು ಮತ್ತು ಅದನ್ನು ತಡೆಗಟ್ಟುವಿಕೆ ವಿಧಾನಗಳನ್ನು ನೀಡಿದಾಗ ವೈದ್ಯರ ಕಾರ್ಯಕ್ಷಮತೆ ಎಲ್ಲರಿಗೂ ಮೆಚ್ಚುವಂತಾಗುತ್ತದೆ.

ವೈದ್ಯನಾದವನು ಎಲ್ಲ ವರ್ಗ, ಎಲ್ಲ ಜಾತಿ-ಮತಗಳೂ ಹಾಗೂ ಎಲ್ಲ ವಯಸ್ಸಿನವರನ್ನು ಒಂದೇ ಭಾವನೆಯಿಂದ ಮತ್ತು ಮಮತೆಯಿಂದ ನೋಡುವಂಥವರಾಗಿರಬೇಕು. ಸಾಕಷ್ಟು ತ್ಯಾಗಮನೋಭಾವವನ್ನು ಹೊಂದಿರುವವ ನಾಗಿರಬೇಕು. ನಿತ್ಯ ಜೀವನದಲ್ಲಿ ಪ್ರತಿ ಹೆಜ್ಜೆಯೂ ಮುಂದಿನ ಯುವ ಪೀಳಿಕೆಯು ಪಾಲಿಸುವಂಥ ನಾಯಕನ ಗುಣ ಹೊಂದಿರುವವರಾಗಿರಬೇಕು. ಏಕೆಂದರೆ ವೈದ್ಯ ಸಮಾಜದಲ್ಲಿ ಒಂದು ಪ್ರಮುಖ ಸ್ಥಾನದಲ್ಲಿದ್ದು ದಿನಂಪ್ರತಿ ಸಾವಿರಾರು ಜನರ ಸಂಪರ್ಕದಲ್ಲಿ ಬರುವವರಾಗಿದ್ದರಿಂದ ಮತ್ತು ಇವರನ್ನೇ ನೋಡಿ ಸಾಕಷ್ಟು ಜನರು ಜೀವನ ಶೈಲಿಯನ್ನು ಅಳವಡಿಸಕೊಳ್ಳುವುದರಿಂದ ವೈದ್ಯ ಶ್ರೇಷ್ಠ ನಾಯಕನ ಗುಣಗಳನ್ನು ಹೊಂದಿದವನಾಗಿರಬೇಕು. ಎಲ್ಲ ರೋಗಿಗಳ ವಿಚಾರಗಳನ್ನು ಆಲಿಸುವ ಮತ್ತು ಸಮಯೋಚಿತವಾಗಿ ಪರೀಕ್ಷಿಸುವ ಸಂವೇದನಾಶೀಲತೆಯುಳ್ಳ ಗುಣವಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net