ಪ್ರಭಾರ ಪ್ರಾಂಶುಪಾಲರು, ನಿಯೋಜಿತ ಪ್ರಾಧ್ಯಾಪಕರು ಮಾತೃ ಕಾಲೇಜಿಗೆ ವಾಪಸ್

college
Published on

ಬೆಂಗಳೂರು: ಅನ್ಯ ಕಾರ್ಯ ನಿಮಿತ್ತ, ಅನ್ಯ ಕಚೇರಿ ಕರ್ತವ್ಯ ನಿಮಿತ್ತ, ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಪ್ರಭಾರ ಪ್ರಾಂಶುಪಾಲರನ್ನು ಮೂಲ ಕಾಲೇಜಿಗೆ ಹಿಂದಿರುಗಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಇತರೆ ಕಾಲೇಜುಗಳಲ್ಲಿ ಅನ್ಯ ಕಾರ್ಯನಿಮಿತ್ತ, ಅನ್ಯ ಕಚೇರಿ ಕರ್ತವ್ಯ ನಿಮಿತ್ತ, ನಿಯೋಜನೆ ಮೇರೆಗೆ ಪ್ರಾಂಶುಪಾಲರ ಪ್ರಭಾರದಲ್ಲಿರಿಸಿರುವ 31 ಪ್ರಾಂಶುಪಾಲರು ಹಾಗೂ ಪಟ್ಟಿಯಲ್ಲಿ ಇಲ್ಲದೇ ಪ್ರಾಂಶುಪಾಲರಾಗಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹ ಪ್ರಾಧ್ಯಾಪಕರು/ ಸಹ ಹಾಗೂ ಸಹಾಯಕ ಪ್ರಾಧ್ಯಾಪಕರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೂಲ ಕಾಲೇಜಿಗೆ ಹಿಂದಿರುಗಿಸಲಾಗಿದೆ.

ಪ್ರಭಾರವನ್ನು ಆಯಾ ಕಾಲೇಜಿನ ಬೋಧಕರ ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಪ್ರಾಧ್ಯಾಪಕರು/ ಸಹ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ವಹಿಸಿ ಬಿಡುಗಡೆಗೊಂಡು ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

48 ಪ್ರಾಧ್ಯಾಪಕರೂ ವಾಪಸ್

ಕಾಲೇಜು ಶಿಕ್ಷಣ ಇಲಾಖೆ ಆಡಳಿತ ವ್ಯಾಪ್ತಿಗೆ ಒಳಪಡುವ ಕೇಂದ್ರ ಕಚೇರಿ/ಪ್ರಾದೇಶಿಕ ಕಚೇರಿ ಹಾಗೂ ಇತರೆ ಕಚೇರಿಗಳಲ್ಲಿ ನಿಯೋಜನೆ, ಅನ್ಯ ಕಚೇರಿ ಕರ್ತವ್ಯ, ಅನ್ಯ ಕಾರ್ಯ ನಿಮಿತ್ತದ ಮೇರೆಗೆ ಕಾರ್ಯ ನಿರ್ವಹಿಸಲು ನಿಯುಕ್ತರಾಗಿರುವ 48 ಪ್ರಾಧ್ಯಾಪಕರು/ ಸಹ ಹಾಗೂ ಸಹಾಯಕ ಪ್ರಾಧ್ಯಾಪಕರ ನಿಯೋಜನೆ, ಅನ್ಯ ಕಚೇರಿ ಕರ್ತವ್ಯ, ಅನ್ಯ ಕಾರ್ಯನಿಮಿತ್ತ ನಿಯುಕ್ತಿಗೊಳಿಸಿರುವುದನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಮಾತೃ ಕಾಲೇಜಿಗೆ ಹಿಂದಿರುಗಿಸಿ ಆದೇಶ ಹೊರಡಿಸಲಾಗಿದೆ.

ಇನ್ನೂ ಕೆಲವರು ಕೇಂದ್ರ ಕಚೇರಿಯಲ್ಲೇ ಬೀಡು!

ಪ್ರಾಧ್ಯಾಪಕರಾಗಿ ನೇಮಕಗೊಂಡ ಕೆಲವರು ಹತ್ತಿಪ್ಪತ್ತು ವರ್ಷಗಳಿಂದ ಕಾಲೇಜಿನಲ್ಲಿ ಪಾಠ ಮಾಡದೆ ಕಾಲೇಜು ಶಿಕ್ಷಣ ಇಲಾಖೆ ಕೇಂದ್ರ ಕಚೇರಿಯಲ್ಲೇ ಬೀಡು ಬಿಟ್ಟಿದ್ದಾರೆ. ಪಟ್ಟಿಯಲ್ಲಿ ಇವರ ಹೆಸರನ್ನೇ ಸೇರಿಸಿಲ್ಲ. ಅವರನ್ನು ಕೂಡ ಮಾತೃ ಕಾಲೇಜಿಗೆ ಹಿಂದಿರುಗಿಸಬೇಕು ಎಂದು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net