

ಸೊರಬ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ.15ರಂದು ಕೆಂಪುಕೋಟೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ ನವರಾತ್ರಿ ಹಬ್ಬಕ್ಕೆ ಜನಸಾಮಾನ್ಯರಿಗೆ ಶುಭ ಸುದ್ದಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಸರಕು ಹಾಗೂ ಸೇವಾ ತೆರಿಗೆ ಕಡಿತಗೊಳಿಸುವ ಮೂಲಕ ಕೊಟ್ಟ ಮಾತು ಈಡೇರಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ಆದಾಯ ಸೋರಿಕೆ ತಡೆಗಟ್ಟಲು 2016ರಲ್ಲಿ ಜಿಎಸ್‌ಟಿ ಜಾರಿಗೆ ತರಲಾಗಿತ್ತು. ಇದೀಗ 375 ವಸ್ತುಗಳಿಗೆ ಅನ್ವಯವಾಗುವಂತೆ ತೆರಿಗೆ ಹೊರೆ ಇಳಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 2.50 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದರು.
ದೇಶದಲ್ಲಿ ಒಟ್ಟು 25 ಕೋಟಿ ಜನರು ಬಡತನದ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ. ಮಧ್ಯಮವರ್ಗ ಮತ್ತು ಸಾಮಾನ್ಯ ಜನರು ಗುಣಮಟ್ಟದ ಜೀವನ ನಡೆಸುವಂತಾಗಿದೆ. ನರೇಂದ್ರ ಮೋದಿ ಅವರು ಸ್ವದೇಶದಲ್ಲಿಯೇ ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಸ್ವದೇಶಿ ಉತ್ಪನ್ನ ಹಾಗೂ ಉತ್ಪಾದಕತೆಗೆ ಉತ್ತೇಜನ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.
ಆನವಟ್ಟಿ ವರ್ತಕರ ಸಂಘದ ಅಧ್ಯಕ್ಷ ಎ.ಎಲ್.ಅರವಿಂದ್ ಮಾತನಾಡಿ, ಜಿಎಸ್‌ಟಿ ಹೊರೆಯಿಂದ ವರ್ತಕರು ಹಾಗೂ ಜನಸಾಮಾನ್ಯರು ಬಳಲುತ್ತಿದ್ದರು. ಈ ತೆರಿಗೆ ಬಂದ ಮೇಲೆ ವ್ಯಾಪಾರದಲ್ಲಿ ಸಣ್ಣಪುಟ್ಟ ತಪ್ಪಾದರೂ ವರ್ತಕರಿಗೆ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪ್ರಮುಖರಾದ ರಾಜು ತಲ್ಲೂರು, ವರ್ತಕ ಪ್ರಕಾಶ್ ಬಾಪಟ್, ಗೋಪಾಲಕೃಷ್ಣ, ಡಾ.ಜ್ಞಾನೇಶ್, ಮಲ್ಲಿಕಾರ್ಜುನ, ಗೀತಾ ಮಲ್ಲಿಕಾರ್ಜುನ, ಪಾಣಿ ರಾಜಪ್ಪ, ಪ್ರಕಾಶ್ ತಲಕಾಲಕೊಪ್ಪ, ಸುರೇಶ್, ಜಾನಕಪ್ಪ, ಉಮೇಶ್, ಸಂಜಯ್ ಡೊಂಗ್ರೆ, ದಯಾನಂದ ಗೌಡ ಇದ್ದರು.