ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಜಯಂತಿ; ಕನ್ನಡದಲ್ಲೇ ಟ್ವೀಟ್​ ಮಾಡಿ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

Modi
Published on

ತುಮಕೂರು: ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 113ನೇ ಪುಣ್ಯಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ಶಿವಕುಮಾರ ಸ್ವಾಮೀಜಿಗಳ ಜನ್ಮದಿನಕ್ಕೆ ಪ್ರತಿವರ್ಷವೂ ನರೇಂದ್ರ ಮೋದಿ ಟ್ವೀಟ್​ ಮೂಲಕ ಶುಭಾಶಯ ಸಲ್ಲಿಸುತ್ತಿದ್ದರು. ಶ್ರೀಗಳು ಲಿಂಗೈಕ್ಯರಾದ ಬಳಿಕ ಇದು ಮೊದಲ ಪುಣ್ಯಜಯಂತಿ ಆಗಿದ್ದು, ಮೋದಿಯವರು ಗೌರವ ನಮನ ಸಲ್ಲಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿಗಳು ಸಮಾಜಕ್ಕೆ ನೀಡಿದ ಉತ್ಕೃಷ್ಟ ಕೊಡುಗೆಗಳು ಸದಾ ಸ್ಫೂರ್ತಿ. ಅವರ ಪಾವಿತ್ರ್ಯತೆಗೆ ನಮನಗಳು ಎಂದು ಹೇಳಿದ್ದಾರೆ. ಸ್ವಾಮೀಜಿಯವರಿಗೆ ಗೌರವ ನಮನಗಳು ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

ಶ್ರೀಗಳು 2019ರ ಜನವರಿ 21ರಂದು ಲಿಂಗೈಕ್ಯರಾದಾಗ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅಂದು ಮೋದಿಯವರು ಬಂದಿರಲಿಲ್ಲ. ಈ ವರ್ಷ ಜನವರಿ 2ರಂದು ತುಮಕೂರಿಗೆ ಬಂದಿದ್ದ ಪ್ರಧಾನಿ ಮೋದಿ, ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದಿದ್ದರು. ಹಾಗೇ ಸ್ವಾಮೀಜಿ ಹೆಸರಿನ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net