ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ರಾಜ್ಯಪಾಲ ಜಗದೀಪ್ ಧನಕರ್ ಜೊತೆ ಮಾತನಾಡಿದ ಪ್ರಧಾನಿ ಮೋದಿ

modi
modi
Published on

ಕಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಆ ರಾಜ್ಯದಲ್ಲಿ ಅಲ್ಲಲ್ಲಿ ಹಿಂಸಾಚಾರಗಳು ನಡೆಯುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಗದೀಪ್ ಧನಕರ್ ಅವರು, ಚುನಾವಣೆ ನಂತರ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳ ಬಗ್ಗೆ ಹಾಗೂ ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವ ಬಗ್ಗೆ ಪ್ರಧಾನಿ ಅವರು ಇಂದು ನನಗೆ ಫೋನ್ ಕರೆ ಮಾಡಿ ಮಾತನಾಡಿ, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾನೂ ಕೂಡ ಪ್ರಧಾನಿಯವರ ಜೊತೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಬಂಗಾಳ ಹಿಂಸಾಚಾರಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂದೀಪ್ ಪಾತ್ರಾ ಅವರು, ಹಿಂದೆಂದೂ ಕಂಡು ಕೇಳರಿಯದ ಚುನಾವಣೋತ್ತರ ರಾಜಕೀಯ ಹಿಂಸಾಚಾರಕ್ಕೆ ಭಾರತ ಸಾಕ್ಷಿಯಾಗಿದೆ ಎಂದು ಬಂಗಾಳ ಹಿಂಸಾಚಾರ ಕಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಅವರ ಮನೆಯವರನ್ನು ಟಿಎಂಸಿ ಕಾರ್ಯಕರ್ತರು ಮನಸೋಇಚ್ಚೇ ಥಳಿಸುತ್ತಿದ್ದಾರೆ. ಇದನ್ನು ನೋಡಿ ದೀದಿ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ದೂರಿದ್ದಾರೆ.

ಇನ್ನು ಬಿಜೆಪಿ ಆರೋಪಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಳ್ಳಿ ಹಾಕಿದ್ದು, ಕೇಂದ್ರಿಯ ಭದ್ರತಾ ಪಡೆಗಳನ್ನು ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net