

ಮೆಹಬೂಬನಗರ(ತೆಲಂಗಾಣ): ಎನ್ಡಿಎ ಸೇರಲು ನಾನು ಬಿಡದ ಕಾರಣ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮತದಾನದ ದಿನ ಅವರಿಗೆ ಜನರು ಸಿನಿಮಾ ತೋರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಾಗ್ದಾಳಿ ನಡೆಸಿದರು.
ಸೋಮವಾರ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮತ್ತು ಕೆಸಿಆರ್ ವಿರುದ್ಧ ‘ಸಮಾನ ಪಾಪಿಗಳು’ ಎಂದು ಟೀಕಿಸಿದರು
ತೆಲಂಗಾಣವನ್ನು ನಾಶ ಮಾಡುವಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರೂ ಸಮಾನ ಪಾಪಿಗಳು. ಹಾಗಾಗಿ, ತೆಲಂಗಾಣ ಜನರು ಬಿಆರ್ಎಸ್ ಮತ್ತು ಕಾಂಗ್ರೆಸ್ ತಿರಸ್ಕರಿಸಬೇಕು. ತೆಲಂಗಾಣ ಜನರ ನಂಬಿಕೆ ಬಿಜೆಪಿ ಮೇಲಿದೆ. ಮುಂದಿನ ಸಿಎಂ ಬಿಜೆಪಿಯಿಂದಲೇ ಎಂದು ನಿರ್ಧರಿಸಿದ್ದೀರಿ. ಮೊದಲ ಬಿಜೆಪಿ ಸಿಎಂ ಒಬಿಸಿ ಸಮುದಾಯದಿಂದ (ಹಿಂದುಳಿದ ವರ್ಗ) ಎಂದು ಬಿಜೆಪಿ ನಿಮಗೆ ಭರವಸೆ ನೀಡಿದೆ ಎಂದು ಅವರು ಹೇಳಿದರು.
ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ ಬಿಜೆಪಿ ಜೊತೆ ಸ್ನೇಹ ಬೆಳೆಸಲು ಪ್ರಯತ್ನ ನಡೆಸುತ್ತಿದ್ದರು. ತೆಲಂಗಾಣ ಜನತೆಯ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಎಂದಿಗೂ ಕೆಲಸ ಮಾಡುವುದಿಲ್ಲ. ಹೀಗಾಗಿಯೇ ಕೆಸಿಆರ್ ನನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದರು. .
ಬಿಜೆಪಿಯ ಹೆಚ್ಚುತ್ತಿರುವ ಶಕ್ತಿಯನ್ನು ಕೆಸಿಆರ್ ಬಹಳ ಹಿಂದೆಯೇ ಅರಿತುಕೊಂಡಿದ್ದರು. ಬಹಳ ದಿನಗಳಿಂದ ಬಿಜೆಪಿಯೊಂದೆ ಗೆಳೆತನ ಮಾಡಲು ಪ್ರಯತ್ನ ನಡೆಸುತ್ತಿದ್ದರು. ಒಮ್ಮೆ ದೆಹಲಿಗೆ ಬಂದಾಗ ಕೆಸಿಆರ್ ನನ್ನನ್ನು ಭೇಟಿಯಾಗಿ ಇದೇ ಮನವಿ ಮಾಡಿದ್ದರು. ಆದರೆ ತೆಲಂಗಾಣ ಜನತೆಯ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಎಂದಿಗೂ ಕೆಲಸ ಮಾಡಲಾರದು ಎಂದು ಪ್ರಧಾನಿ ಹೇಳಿದರು.
ಬಿಜೆಪಿ ಕೆಸಿಆರ್ ಮತ್ತು ಅವರ ಪಕ್ಷವನ್ನು ತಿರಸ್ಕರಿಸಿದಾಗಿನಿಂದ ಬಿಆರ್ಎಸ್ ಗೊಂದಲಕ್ಕೊಳಗಾಗಿದೆ. ನನ್ನನ್ನು ನಿಂದಿಸುವ ಯಾವುದೇ ಅವಕಾಶವನ್ನು ಆ ಪಕ್ಷ ಕಳೆದುಕೊಳ್ಳುವುದಿಲ್ಲ. ಮೋದಿ ಬಿಜೆಪಿಯ ಹತ್ತಿರಬಿಡುವುದಿಲ್ಲ ಎಂಬುದು ಬಿಆರ್ಎಸ್ಗೆ ತಿಳಿದಿದೆ. ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೆಸಿಆರ್ ಪ್ರಯತ್ನಿಸುತ್ತಿರುವ ಬಗ್ಗೆ ಪ್ರಧಾನಿಯವರು ಇದೇ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ನಿಜಾಮಾಬಾದ್ನಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರು ಕೆಸಿಆರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಿದ್ದರು.
“ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ 48ಸ್ಥಾನ ಗೆದ್ದ ನಂತರ, ಕೆಸಿಆರ್ ನನ್ನನ್ನು ಭೇಟಿ ಮಾಡಲು ದೆಹಲಿಗೆ ಬಂದರು. ಎನ್ ಡಿಎ ಸೇರಲು ಬಯಸುವುದಾಗಿ ಹೇಳಿದರು. ಅವರಿಗೆ ಬೆಂಬಲ ನೀಡುವಂತೆಯೂ ಕೇಳಿಕೊಂಡರು. ಆದರೆ ಅವರ ದುರಾಡಳಿತದಿಂದಾಗಿ ಅವರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ನಾನು ಅವರಿಗೆ (ಕೆಸಿಆರ್) ಹೇಳಿದ್ದೇನೆ ಎಂದು ಮೋದಿ ಹೇಳಿದರು.
ತೆಲಂಗಾಣದಲ್ಲಿ ನ.30 ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಡಿ.3 ರಂದು ಮತ ಎಣಿಕೆ ನಡೆಯಲಿದೆ.