ಅಧಿವೇಶನದಲ್ಲಿ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರಕ್ಕೆ ಪಟ್ಟು : ಆರ್.ಅಶೋಕ್

R Ashok
Published on

ಬೆಂಗಳೂರು: ಗ್ಯಾರೆಂಟಿ ಜಾರಿಯಿಂದ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಗ್ಯಾರೆಂಟಿ ಯೋಜನೆಗಳ ಅರೆಬರೆ ಜಾರಿಯಿಂದ ಬೊಕ್ಕಸ ಬರಿದಾಗಿದೆ. ಹೀಗಾಗಿ ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದು ಸಂವೇದನಾ ರಹಿತ ಎಡಬಿಡಂಗಿ ಸರ್ಕಾರ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹರಿಹಾಯ್ದರು.

ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸರ್ಕಾರದ ಬಣ್ಣ ಬಯಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದರೂ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಕೇಂದ್ರದ ಮೇಲೆ ಗೂಬೆ ಸಲ್ಲದು

ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಮೊದಲು ರಾಜ್ಯ ಸರ್ಕಾರದ ಪಾತ್ರ, ಹೊಣೆಗಾರಿಕೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮೊದಲು ರೈತರ ಸಂಕಷ್ಟಕ್ಕೆ ಧಾವಿಸಿದ್ದೆವು. ಎನ್‌ಡಿಆರ್‌ಎ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದೆವು. ನಂತರ ಕೇಂದ್ರದ ನೆರವು ಖಜಾನೆಗೆ ಬಂತು. ಆ ಕೆಲಸ ಮಾಡಲು ಇವರಿಗೇನು ದಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶವನ್ನು ಹೊರಡಿಸಿಲ್ಲ. ಕನಿಷ್ಟಪಕ್ಷ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಕೇಳಿದರೆ ಎಲ್ಲದಕ್ಕೂ ಲಂಚ ಕೊಡಬೇಕು. ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ ಎಂದರು.

ಹಣ ತಕ್ಷಣ ಬಿಡುಡಗೆ ಮಾಡಬೇಕು

ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ. ಅದು ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಇವರು ಮಾಡಿರುವ ಖರ್ಚು ವೆಚ್ಚ ಮತ್ತು ಹಣಕಾಸಿನ ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.

ಬೋಗಸ್ ದರ್ಶನ

ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯಕ್ರಮವನ್ನು ಬೋಗಸ್ ದರ್ಶನ ಎಂದು ಲೇವಡಿ ಮಾಡಿದ ಅಶೋಕ್, ನೆಟ್ಟಗೆ ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು. ಯಾರ‌್ಯಾರು ಏನು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಖುರ್ಚಿ, ಮೇಜು ಹಾಕಿಸಿ ಮನವಿ ಪತ್ರ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಿದ್ದಯಿಂದ ಇವತ್ತು ಎದ್ದಿದೆ

ದಿಢೀರ್ ಆಗಿ ಸಿಎಂ ಅವರು ಜನತಾದರ್ಶನ ಮಾಡುತ್ತಿದ್ದಾರೆ ಎಂದರೆ ಇವತ್ತು ದೀರ್ಘ ಕಾಲದ ನಿದ್ದೆಯಿಂದ ಎದ್ದಿದ್ದಾರೆ ಎಂದೇ ಅರ್ಥ. ಏಕೆಂದರೆ ಆಡಳಿತ ಸಂಪೂರ್ಣ ನೆಲಕಚ್ಚಿದ್ದು ಅಧಿಕಾರಶಾಹಿ ಜನರ ಶೋಷಣೆಯಲ್ಲಿ ನಿರತವಾಗಿದೆ. ಇದನ್ನು ಗಮನಿಸಿ ಸರಿಪಡಿಸಬೇಕಿದ್ದ ಸಚಿವರು ತೆಲಂಗಾಣ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಕ್ರಾಂತಿ ಆಗಿದೆ ಎಂದು ಬುರುಡೆ ಭಾಷಣ ಬಿಗಿಯುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಡಿದಿರುವ ಬರಗಾಲ ನಿವಾರಣೆಗಾಗಿ ಸಿದ್ದರಾಮಯ್ಯ ಎಲ್ಲ ಸಚಿವರನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಇಲ್ಲಿ ಜನ ತತ್ತರಿಸುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಮೊದಲು ಪಕ್ಷದ ಸಿದ್ಧಾಂತ ಅರಿತುಕೊಳ್ಳಲಿ...

ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅಶೋಕ್, ಈಗಾಗಲೇ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಪಕ್ಷಗಳ ಸಂಸ್ಥಾಪಕ ಅಧ್ಯಕ್ಷರು ಯಾರು ಎಂಬುದನ್ನೇ ತಿಳಿದುಕೊಂಡಿಲ್ಲ. ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷ ಬ್ರಿಟಿಷ್ ಎಂಬುದೂ ಗೊತ್ತಿಲ್ಲ. ಅವರ ಪರಂಪರೆಯೇ ಕಾಂಗ್ರೆಸ್‌ನಲ್ಲಿ ಮುಂದುವರೆಯುತ್ತಿದೆ. ಯುಪಿಎ ಅವಧಿಯಲ್ಲಿ ಕಾಶ್ಮೀರದಲ್ಲಿ ಸೈನಿಕರಿಗೆ ಕಾಸು ಕೊಟ್ಟು ಕಲ್ಲು ಹೊಡೆಸುತ್ತಿದ್ದರು. ಅವರೆಲ್ಲರೂ ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದಕ್ಕೆ ಮೋದಿ ಸರ್ಕಾರದ ಕಠಿಣ ಕ್ರಮಗಳು ಕಾರಣ ಎಂದು ಅಶೋಕ್ ತಿರುಗೇಟು ನೀಡಿದರು.

ಸಿಎಂ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಜನತಾದರ್ಶನ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದಿದ್ದರೆ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಅದನ್ನು ಬಿಟ್ಟು ಸಿಎಂ ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ.

-ಆರ್.ಅಶೋಕ್, ವಿದಾನಸಭೆ ಪ್ರತಿಪಕ್ಷ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net