ಕಾರ್ಗಿಲ್​ ವಿಜಯದಿವಸ್​​ನಲ್ಲೂ ಪ್ರಧಾನಿ ಮೋದಿ ರಾಜಕಾರಣ ; ಮಲ್ಲಿಕಾರ್ಜುನ ಖರ್ಗೆ

Untitled-design-98
Published on

ನವದೆಹಲಿ: ಕಾರ್ಗಿಲ್ ವಿಜಯದಿವಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ(ಜುಲೈ 26) ಆರೋಪಿಸಿದ್ದಾರೆ.

ಕಾರ್ಗಿಲ್ ವಿಜಯದಿವಸ್‌ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಹ ಸಮಯದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯವಾಗಿದೆ. ಈ ಹಿಂದೆ ಯಾವ ಪ್ರಧಾನಿಯೂ ಇದನ್ನು ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ತಮ್ಮ ಸರ್ಕಾರವು ಸೇನೆಯ ಆಜ್ಞೆಯ ಮೇರೆಗೆ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ ಎಂಬ ಪ್ರಧಾನಮಂತ್ರಿಯವರ ಹೇಳಿಕೆಯು ಸುಳ್ಳು ಮತ್ತು ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಕ್ಷಮಿಸಲಾಗದ ಅವಮಾನ ಎಂದು ಹೇಳಿದ್ದಾರೆ.

ಮೋದಿ ಜೀ, ನೀವು ಸುಳ್ಳುಗಳನ್ನು ಹರಡುತ್ತಿರುವಿರಿ! ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜನರಲ್ ಎಂಎಂ ನರವಾಣೆ ಅವರು ಅಗ್ನಿಪಥ ಯೋಜನೆಯಲ್ಲಿ 75% ನೇಮಕಾತಿಗಳನ್ನು ಕಾಯಂಗಾಗಿ ತೆಗೆದುಕೊಳ್ಳಬೇಕಾಗಿತ್ತು. ಮತ್ತು 25% ಜನರನ್ನು 4 ವರ್ಷಗಳ ನಂತರ ಕೈಬಿಡಲಾಯಿತು ಎಂದು ದಾಖಲೆಯಲ್ಲಿ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿದೆ. ಎಲ್ಲಾ ಮೂರು ಸಶಸ್ತ್ರ ಪಡೆಗಳಿಗೆ ಬಲವಂತವಾಗಿ ಈ ಯೋಜನೆಯನ್ನು ಜಾರಿಗೆ ತಂದಿತು ಎಂದು ಖರ್ಗೆ ಆರೋಪಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ಗ್ರಾಮೀಣ ಹಿನ್ನೆಲೆಯ ಯುವಕರ ಆಕಾಂಕ್ಷೆಗಳಿಗೆ ಅಪಾಯವನ್ನುಂಟುಮಾಡುತ್ತಿದೆ. ಅಗ್ನಿಪಥ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಹಿಂದಿನ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಖರ್ಗೆ ತಿಳಿಸಿದರು. ಅಗ್ನಿವೀರರಿಗೆ ಯಾವುದೇ ಪಿಂಚಣಿ, ಗ್ರಾಚ್ಯುಟಿ, ಕುಟುಂಬ ಪಿಂಚಣಿ, ಅವರ ಮಕ್ಕಳಿಗೆ ಶಿಕ್ಷಣ ಭತ್ಯೆ ಇಲ್ಲ ಎಂದು ಖರ್ಗೆ ಹೇಳಿದ್ದಾರೆ.

ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದಲ್ಲಿ, ಅಗ್ನಿಪಥ ಯೋಜನೆಯನ್ನು ಟೀಕಿಸಿದ್ದಕ್ಕಾಗಿ ಪ್ರತಿಪಕ್ಷಗಳು ದೇಶದ ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ. ಇದು ಅವರಿಗೆ ಸೈನಿಕರ ಬಗ್ಗೆ ಕಾಳಜಿಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net