ಧಾರವಾಡದ ಐಐಟಿ ಕ್ಯಾಂಪಸ್​ಗೆ ಬಂದಿಳಿದ ಪ್ರಧಾನಿ ಮೋದಿ

Modi In Hubbali
Published on

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ವಾಯುಪಡೆಯ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್​ನಲ್ಲಿ ಧಾರವಾಡ ಐಐಟಿ ಕ್ಯಾಂಪಸ್​ನಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್​​ನಲ್ಲಿ ಬಂದಿಳಿದಿದ್ದಾರೆ. ರಾಜ್ಯದ ಮೊದಲ ಐಐಟಿ ಕಟ್ಟಡವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಜತೆಗೆ ಏಷ್ಯಾದ ಅತೀ ಉದ್ದದ ರೈಲ್ವೇ ಫ್ಲಾಟ್ ಫಾರಂ ಲೋಕಾರ್ಪಣೆಗೊಳಿಸಿ, ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹುಬ್ಬಳ್ಳಿಗೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಅವರೊಂದಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟರಂಗಿನಕಾಯಿ. ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಇತರರು ಮೋದಿ ಅವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ಧಾರವಾಡ ಕಡೆಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಪ್ರಹ್ಲಾದ ಜೋಶಿ ತೆರಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಿಂದ ನಿರ್ಗಮಿಸಿದ್ದ ಪ್ರಧಾನಿ ಮೋದಿ, ಮದ್ದೂರಿನಿಂದ‌ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಕ ಹುಬ್ಬಳ್ಳಿಗೆ ತೆರಳಿದ್ದರು.

ಪ್ರಧಾನಿ ಮೋದಿ ಕಾರ್ಯಕ್ರಮದ ಮುಖ್ಯವೇದಿಕೆಯಲ್ಲಿ ಚಾಲುಕ್ಯ ಹಾಗೂ ವಿಜಯನಗರದ ವಾಸ್ತು ಶಿಲ್ಪ ಮಾದರಿಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಸಿರಿಧಾನ್ಯಗಳಿಂದ ಕಲಾಕೃತಿಗಳನ್ನು ಮಾಡಲಾಗಿದ್ದು, ಅವುಗಳ ಮೂಲಕ ಮೋದಿ ಅವರಿಗೆ ಸ್ವಾಗತ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net