

ರಾಜ್ಯದಲ್ಲಿ ಬೆಲೆಯೇರಿಕೆಯ ಸರಣಿ ಮುಂದುವರಿದಿದೆ. ಈಗ ವಾಣಿಜ್ಯ ಬಳಕೆ ವಾಹನಗಳ ಖರೀದಿ ಇನ್ನಷ್ಟು ದುಬಾರಿಯಾಗುತ್ತಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹಳೆಯ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ (ಎಫ್ಸಿ) ಶುಲ್ಕ ಹೆಚ್ಚಿಸಿ ಕರಡು ಪ್ರಕಟಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ಸರ್ಕಾರವೂ ಕೆಲ ವಾಹನಗಳ ಮೇಲೆ ತೆರಿಗೆ ಹೆಚ್ಚಿಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಈ ಆಘಾತದ ನಡುವೆ ಏಪ್ರಿಲ್ 1ರಿಂದ ಉತ್ಪಾದನಾ ಕಂಪನಿಗಳು ವಾಹನಗಳ ಮಾರಾಟ ದರ ಹೆಚ್ಚಿಸಲು ನಿರ್ಧರಿಸಿದ್ದು, ವಾಹನಗಳ ಬೆಲೆಯಲ್ಲೂ ಭಾರಿ ಏರಿಕೆ ಆಗಲಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2025 ಅನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಅದರನ್ವಯ ವಾಣಿಜ್ಯ ವಾಹನಗಳ ತೆರಿಗೆ ಏರಿಕೆ ಮಾಡಲಾಗಿದೆ. ಇನ್ನು ಮುಂದೆ 10 ಲಕ್ಷ ರೂಪಾಯಿಗಿಂತ ಒಳಗಿರುವ ಕ್ಯಾಬ್ಗಳಿಗೂ ಜೀವಿತಾವಧಿ (ಲೈಫ್ ಟೈಂ) ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈವರೆಗೆ 10 ಲಕ್ಷ ರೂ.ಗಿಂತ ಮೇಲ್ಪಟ್ಟ ವಾಹನಗಳಿಗಷ್ಟೇ ತೆರಿಗೆ ಪಾವತಿಸಬೇಕಿತ್ತು. ಅಲ್ಲದೆ, ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳ ತೆರಿಗೆಯನ್ನು ಶೇ.6 ರಿಂದ ಶೇ.8ಕ್ಕೆ ಏರಿಸಲಾಗಿದೆ. ಇದು ವಾಹನ ಖರೀದಿದಾರರಿಗೆ ಹೊರೆಯಾಗಿ ಪರಿಣಮಿಸಲಿದ್ದು, ಸಂಬಂಧಿತ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಇದೆ. 15 ವರ್ಷ ಮೇಲ್ಪಟ್ಟ ವಾಹನಗಳ ಎಫ್ಸಿ ಶುಲ್ಕವನ್ನು ಲಘು ಮೋಟಾರು ವಾಹನಕ್ಕೆ 5 ಸಾವಿರ ರೂ., ಮಧ್ಯಮ ಗೂಡ್ಸ್ ಹಾಗೂ ಪ್ರಯಾಣಿಕ ವಾಹನಕ್ಕೆ 12 ಸಾವಿರ ರೂ., ಭಾರಿ ಗೂಡ್ಸ್ ಹಾಗೂ ಪ್ರಯಾಣಿಕ ವಾಹನಕ್ಕೆ ಬರೋಬ್ಬರಿ 18 ಸಾವಿರ ರೂ.ಗೆ ಏರಿಸಲು ನಿರ್ಧರಿಸಲಾಗಿದೆ.
ಉತ್ಪಾದನಾ ವೆಚ್ಚ, ಕಾರ್ಯಾಚರಣೆ ವೆಚ್ಚ ಇದೆಲ್ಲವನ್ನೂ ಅವಲೋಕಿಸಿ ಬೆಲೆ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ, ಯಾವುದೇ ವಲಯದ ಬೆಲೆ ಏರಿಕೆಯು ವೈಜ್ಞಾನಿಕವಾಗಿ ಇರಬೇಕು, ಏಕಾಏಕಿ ಭಾರಿ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಬಾರದು. ಒಂದೆಡೆ ಸರ್ಕಾರವು ವಿದ್ಯುತ್, ಸಾರಿಗೆ, ನೀರು, ಹಾಲು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಮತ್ತೊಂದೆಡೆ, ಖಾಸಗಿ ವಲಯವು ಉದ್ಯಮದ ಲೆಕ್ಕಾಚಾರದಲ್ಲಿ ಬೆಲೆ ಏರಿಕೆ ಮಾಡುತ್ತಿದೆ. ಇವುಗಳ ನಡುವೆ ಶ್ರೀಸಾಮಾನ್ಯನ ಸ್ಥಿತಿ ಮಾತ್ರ ಶೋಚನೀಯ. ಬೆಲೆಯೇರಿಕೆ ವಿರುದ್ಧ ಹೋರಾಡಲು ಜನಸಾಮಾನ್ಯರ ಬಳಿ ಯಾವುದೇ ಅಸ್ತ್ರಗಳಿಲ್ಲ. ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗಗಳಿಲ್ಲ. ಅದರಲ್ಲೂ, ಸಂಬಳದ ಆದಾಯವನ್ನಷ್ಟೇ ನೆಚ್ಚಿಕೊಂಡಿರುವವರು ಸಾಲದ ಸರಣಿಗೆ ಹೈರಾಣಾಗಿ ಹೋಗಿದ್ದಾರೆ.
ಹೊಸ ಆರ್ಥಿಕ ವರ್ಷ ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿವೆ. ಹೊಸ ಆರ್ಥಿಕ ವರ್ಷವನ್ನು ಉಳಿತಾಯ, ಹೂಡಿಕೆಯಿಂದ ಆರಂಭಿಸಬೇಕು ಎಂಬ ಮಧ್ಯಮವರ್ಗದವರ ಆಶಯವನ್ನು ಬೆಲೆಯೇರಿಕೆಯ ಭೂತ ಹಾಳು ಮಾಡದಿರಲಿ. ಬಹುತೇಕ ಎಲ್ಲ ವಲಯಗಳು ಸ್ಪರ್ಧೆಗೆ ಬಿದ್ದವರಂತೆ ದರ ಏರಿಕೆಗೆ ಮುಂದಾದರೆ, ಹೂಡಿಕೆ, ಮಾರುಕಟ್ಟೆ, ವಹಿವಾಟಿನ ಮೇಲೂ ಪರಿಣಾಮವಾಗುತ್ತದೆ. ಒಟ್ಟಾರೆ, ಬೆಲೆಯೇರಿಕೆ ಜನಸಾಮಾನ್ಯರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಬಾರದು.