

ತ್ಯಾಮಗೊಂಡ್ಲು: ಕ್ವಿನ್ ಸಿಟಿಗಾಗಿ ಹೋಬಳಿಯ ಕೊಡಿಗೇಹಳ್ಳಿ, ಬಳಗೆರೆ ಹಾಗೂ ಕೆಂಚನಪುರದ 1500 ಎಕರೆ ಜಮೀನನ್ನು ಕೆಎಐಡಿಬಿ ಸ್ವಾಧೀನ ಪಡಿಸಿಕೊಳ್ಳಲು ಮೊದಲಿಗೆ ಎಕರೆಗೆ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿಗೆ ವಿಶೇಷ ಜಿಲ್ಲಾಧಿಕಾರಿ ದರ ನಿಗದಿ ಮಾಡುವ ಮೂಲಕ ಸಂಧಾನ ಸಲವಾಯಿತು.
ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಮಾತನಾಡಿ, 2013ರಲ್ಲಿ ಸರ್ಕಾರ ಹೊರಡಿಸಿದ ಅನುಸೂಚಿ ಪ್ರಕಾರ ಕೊಡಿಗೆಹಳ್ಳಿ ಜಮೀನುಗಳಿಗೆ ಎಕರೆಗೆ 94 ಲಕ್ಷ ರೂಪಾಯಿ ಇದೆ. ಆದರೆ, ರೈತರಿಗೆ ಉತ್ತಮ ದರ ನೀಡಬೇಕು ಎಂಬ ಉದ್ದೇಶದಿಂದ ಅದಕ್ಕೆ ಒಂದು ಕೋಟಿ ಮುವತ್ತು ಲಕ್ಷ ರೂ. ನೀಡುವುದಾಗಿ ತಿಳಿಸಿದರು.
ವಿಶೇಷ ಜಿಲ್ಲಾಧಿಕಾರಿಯವರ ಮಾತಿಗೆ ಒಪ್ಪದ ರೈತರು ಸಭೆಯಿಂದ ನಿರ್ಗಮಿಸಲು ಪ್ರಾರಂಭಿಸಿದರು. ಆಗ ಒಂದೂವರೆ ಕೋಟಿ ನಿಗದಿ ಮಾಡಲು ಮುಂದಾದರು. ಗ್ರಾಪಂ ಸದಸ್ಯ ನರಸಿಂಹಮೂರ್ತಿ(ಮನು) ಎಕರೆಗೆ 3 ಕೋಟಿ ನೀಡಿದರೆ ಮಾತ್ರ ಜಮೀನು ನೀಡುತ್ತೇವೆ. ಅದಲ್ಲದೆ, ಇಂದು ಕೇವಲ ಶೇ. 20 ರೈತರು ಮಾತ್ರ ಸಭೆಯಲ್ಲಿದ್ದಾರೆ. ಪೂರ್ಣ ಸಂಖ್ಯೆಯಲ್ಲಿ ರೈತರು ಬಂದಾಗ ಸಭೆ ನಡೆಸಿ ದರ ನಿಗದಿ ಮಾಡಿ ಸಭೆ ಮುಂದೂಡಿ ಎಂದು ಆಗ್ರಹಿಸಿದರು. ಆಗ ಜಿಲ್ಲಾಧಿಕಾರಿ ಎಕರೆಗೆ ಒಂದು ಕೋಟಿ ಅರವತ್ತು ಲಕ್ಷಕ್ಕೆ ದರ ನಿಗದಿ ಮಾಡಿ ಮುಕ್ತಾಯ ಮಾಡಿದರು.
ರೈತರ ಪಟ್ಟು: ಕ್ವೀನ್ ಸಿಟಿಗಾಗಿ ಹೋಬಳಿಯ ಕೊಡಿಗೇಹಳ್ಳಿ, ಬಳಗೆರೆ ಹಾಗೂ ಕೆಂಚನಪುರದ 1500 ಎಕರೆ ಜಮೀನನ್ನು ಕೆಎಐಡಿಬಿ ಸ್ವಾಧೀನ ಪಡಿಸಿಕೊಳ್ಳಲು ಮೊದಲಿಗೆ ಕೊಡಿಗೇಹಳ್ಳಿ ರೈತರಿಗೆ ನೋಟಿಸ್ ನೀಡಿ ದರ ನಿಗದಿಗೆ ಸೋಮವಾರ ಪಟ್ಟಣದ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ರೈತರು ಬಹಿಷ್ಕಾರ ಹಾಕಿದರು.
ವಿಶೇಷ ಜಿಲ್ಲಾಧಿಕಾರಿ ರಘುನಂದನ್ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಗೆ ಪ್ರಾರಂಭದಲ್ಲಿ ಕೊಡಿಗೇಹಳ್ಳಿ ರೈತರು ವಕೀಲ ಹಾಗೂ ಗ್ರಾಪಂ ಸದಸ್ಯ ನರಸಿಂಹಮೂರ್ತಿ(ಮನು) ನೇತೃತ್ವದಲ್ಲಿ ಕಲ್ಯಾಣ ಮಂಟಪದ ಮುಂದೆ ಕೆಎಐಡಿಬಿ ವಿರುದ್ಧ ೋಷಣೆಗಳನ್ನು ಕೂಗಿದರಲ್ಲದೆ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಪರಿಸ್ಥಿತಿಯ ಗಂಭೀರತೆ ಅರಿತ ತ್ಯಾಮಗೊಂಡ್ಲು ಠಾಣೆ ಇನ್‌ಸ್ಪೆಕ್ಟರ್ ರಂಜನ್‌ಕುಮಾರ್ ಪ್ರತಿಭಟನಾಕಾರರ ಮನವೊಲಿಸಿ ಅಹವಾಲನ್ನು ವಿಶೇಷ ಜಿಲ್ಲಾಧಿಕಾರಿ ಮುಂದೆ ಹೇಳಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಸಭೆಗೆ ಹಾಜರಾಗಿ ಎಂದು ಪರಿಸ್ಥಿತಿ ತಿಳಿಗೊಳಿಸಿದರು.
ಸಭೆ ಆರಂಭದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಮಾತನಾಡಿ, ಕ್ವೀನ್‌ಸಿಟಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇಲ್ಲಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕಿನ 5000 ಎಕರೆ ವಿಸ್ತೀರ್ಣದಲ್ಲಿ ಪ್ರಪಂಚದ ಅತ್ಯುತ್ತಮ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲಿವೆ. ಇದರಿಂದ ರೈತರಿಗೂ ಕೂಡ ಮಾರುಕಟ್ಟೆ ಬೆಲೆ ನೀಡಲಾಗುತ್ತದೆ. ಗ್ರಾಮ ಠಾಣೆ ವ್ಯಾಪ್ತಿಯ ಶಾಲೆ, ಸ್ಮಶಾನ, ಆಸ್ಪತ್ರೆ ಮತ್ತು ದೇವಸ್ಥಾನಗಳನ್ನು ಸ್ವಾಧೀನದಿಂದ ಬಿಡಲಾಗುತ್ತದೆ. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಹೇಳಿದರು.
ತಾರತಮ್ಯ ಬೇಡ
ಪ್ರಥಮ ನೋಟಿಸ್ ನೀಡಿದಾಗ ಇದ್ದ ಭೂಸ್ವಾಧೀನದ ಜಮೀನುಗಳ ಪೈಕಿ ಎರಡನೇ ನೋಟಿಸ್ ನೀಡುವಾಗ ಕೈಬಿಡಲಾಗಿದೆ. ಆ ಜಮೀನುಗಳನ್ನು ಕೈಬಿಡಲು ಅನುಸರಿಸಿದ ಮಾರ್ಗಸೂಚಿಯನ್ನೇ ನಮ್ಮ ಜಮೀನುಗಳಿಗೂ ಅನುಸರಿಸಿ ನಮ್ಮ ಜಮೀನನ್ನು ಕೈಬಿಡಿ ಅಥವಾ ಅವರ ಜಮೀನನ್ನು ಸೇರಿಸಿಕೊಳ್ಳಿ. ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಬಳಗೆರೆ ರೈತ ಪ್ರಕಾಶ್ ಮನವಿ ಮಾಡಿದರು. ಹತ್ತುಕುಂಟೆ ಪಾಳ್ಯದ ವಕೀಲ ಜಯರಾಜು ಮಾತನಾಡಿ, ಗ್ರಾಮಠಾಣದಿಂದ ಕನಿಷ್ಠ 300 ಮೀಟರ್ ಬಿಡಬೇಕು. ಈಗ ಬೆಲೆ ನಿಗದಿ ಮಾಡಿದ ಮೇಲೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ಹಣ ನೀಡಲು ತಡವಾದರೆ ಹಣ ನೀಡುವ ಸಮಯದಲ್ಲಿ ಇರುವ ಜಮೀನಿನ ಬೆಲೆ ನೀಡಬೇಕು. ಬೆಂಗಳೂರು ಗ್ರಾಮಾಂತರ ಹೆಸರಿನಲ್ಲಿ ಭೂಸ್ವಾಧೀನ ಮಾಡಿ ಮುಂದೆ ಬೆಂಗಳೂರು ಉತ್ತರ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಕಂಪನಿಗಳಿಗೆ ಮಾರುವ ಹುನ್ನಾರ ಇದೆ. ರೈತರಿಗೆ ಅನ್ಯಾಯ ಮಾಡದೆ ಉತ್ತಮ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು. ಅಭಿವೃದ್ಧಿ ಅಧಿಕಾರಿ ಲೀಲಾವತಿ, ವ್ಯವಸ್ಥಾಪಕ ಚಂದ್ರಶೇಖರ್, ಎಇ ಮಹೇಂದರ್, ಗ್ರಾಪಂ ಸದಸ್ಯ ಶೇಖರ್, ಕೆಂಪಣ್ಣ, ಕೊಡಿಗೆಹಳ್ಳಿ ಕೃಷ್ಣಪ್ಪ, ಹನುಮಂತರಾಜು, ಹತ್ತುಕುಂಟೆಪಾಳ್ಯ ರಾಜು, ವಾದಕುಂಟೆ ಸುಬ್ಬಣ್ಣ, ರುದ್ರೇಶ್, ಕೊಡಿಗೇಹಳ್ಳಿ ಮಂಜುನಾತ್, ಅಶ್ವತ್ಥ್ ನಾರಾಯಣ್ , ಬೈರಹನುಮಯ್ಯ, ಕೃಷ್ಣಮೂರ್ತಿ, ವೆಂಕಟೇಶ್.ಕೆ.ಜಿ, ಇದ್ದರು.