

ಕಿರುವಾರ ಎಸ್. ಸುದರ್ಶನ್ ಕೋಲಾರ
ಜಿಲ್ಲೆಯಾದ್ಯಂತ ಮುಂಗಾರು ಪೂರ್ವದಲ್ಲೇ ಉತ್ತಮವಾಗಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದ ಸಂಭವಿಸುವ ಅನಾಹುತಗಳಿಂದ ಪಾರಾಗಲು ಈಗಲೇ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ ಅಗತ್ಯವಿದೆ.
ಮುಚ್ಚಿರುವ ರಾಜಕಾಲುವೆ, ಚರಂಡಿ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಮುಂದಾಗಬೇಕಿದೆ. ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿರುವುದರಿಂದ ಹಿಂದಿನ ವರ್ಷವೂ ಮಳೆಗಾಲದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದವು. ರೈಲ್ವೆ ಕೇಳ ಸೇತುವೆಗಳಲ್ಲಿ ನೀರು ಸಂಗ್ರಹವಾಗಿ, ಸಂಚಾರ ವ್ಯತ್ಯಯ, ಬೆಳೆಗಳ ಹಾನಿ, ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹ, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅನಾಹುತವೇ ಸೃಷ್ಟಿ, ಮನೆಗಳು ಧೆರೆಗುರುಳಿದ್ದು… ಹೀಗೆ ವಿವಿಧ ತೊಂದರೆ ಎದುರಾಗಿದ್ದವು. ಆದರೆ, ಈ ವರ್ಷವೂ ಚರಂಡಿ ಸೇರಿ ಸಮಸ್ಯೆ ಸೃಷ್ಟಿಯಾಗುವ ಪ್ರಮುಖ ಜಾಗಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ.
ಕೀಲುಕೋಟೆ, ಕಾರಂಜಿ ಕಟ್ಟೆ, ರಹಮತ್ ನಗರ, ಮಿಲ್ಲಥ್ ನಗರ, ಗಲ್‌ಪೇಟೆ, ಪಾಲಸಂದ್ರ ಬಡಾವಣೆಗಳಲ್ಲಿ ರಾಜಕಾಲುವೆ, ಚರಂಡಿಗಳಲ್ಲಿ ಕಸದ ರಾಶಿ ಬಿದಿದ್ದೆ. ಮಳೆ ತೀವ್ರಗೊಳ್ಳುವ ಮೊದಲೇ ಸ್ವಚ್ಛಗೊಳಿಸಿದರೆ ಮುಂದೆ ಸಂಭವಿಸುವ ಅನಾಹುತ ತಡೆಗಟ್ಟಬಹುದು.
* ಕಾಮಗಾರಿ ಅಪೂರ್ಣ:
ಅಂತರಗಂಗೆ ಬೆಟ್ಟದ ತಪ್ಪಲಿಂದ ಕೋಲಾರಮ್ಮ ಕೆರೆಗೆ ಹಾದು ಹೋಗಿರುವ ರಾಜಕಾಲುವೆಗೆ ಕಾಂಕ್ರೀಟ್ ಹಾಕಲಾಗಿದೆ. ಆದರೆ, ಕೀಲುಕೋಟೆ ಸಮೀಪ ಕಾಮಗಾರಿ ಅಪೂರ್ಣಗೊಂಡಿದ್ದು, ಮಳೆ ಬಂದರೆ ಬೆಟ್ಟದ ಮೇಲಿನ ನೀರು ಜಮೀನಿಗೆ ನುಗ್ಗುತ್ತದೆ.
ಇತ್ತೀಚೆಗೆ ಸುರಿದ ಮಳೆಗೆ ಜಿಲ್ಲೆಯ ಜಂಗಮಬಸಾಪುರ, ಕೆಜಿಎಫ್, ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಕ್ಯಾಪ್ಸಿಕಂ, ಟೊಮ್ಯಾಟೊ, ಬಾಳೆ ಹಾಗೂ ಮಾವು ಬೆಳೆಗಳು ಹಾನಿಯಾಗಿದೆ.
ಶನಿವಾರ ಕೋಲಾರ ಸಮೀಪದ ಮಲ್ಲಸಂದ್ರ ಗ್ರಾಮದ ಸುತ್ತಮುತ್ತಲು ಉತ್ತಮ ಮಳೆಯಾಗಿದ್ದು, ರಾಜಕಾಲುವೆಗಳಲ್ಲಿ ಗಿಡಗಂಟಿ ಬೆಳೆದಿರುವುದರಿಂದ ಮಳೆ ನೀರು ರೈತರ ತೋಟಗಳಿಗೆ ನುಗ್ಗಿದೆ. ದೊಮ್ಮರಹಳ್ಳಿ ಬಳಿಯ ಲೇಔಟ್ ನೀರು ಜಮೀನಿಗೆ ನುಗ್ಗಿ ಹೂವು, ಬೀನ್ಸ್ ಬೆಳೆಗಳಿಗೆ ಹಾನಿಯಾಗಿದೆ.
ಲೇಔಟ್ ಮಾಲೀಕರು ನೀರನ್ನು ರಾಜಕಾಲುವೆಗೆ ಬಿಡದೆ ತೋಟಗಳ ಮೂಲಕ ಹಾದು ಹೋಗುವಂತೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಲೇಔಟ್ ಮಾಲೀಕರನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಮಲ್ಲಸಂದ್ರ ರೈತರು ದೂರಿದರು.