

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ನೌಕರರಿಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಪ್ರಕರಣ ರದ್ದು ಕೋರಿ ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ. ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಸರ್ಕಾರಿ ನೌಕರನಲ್ಲದ ತನಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯಿಸುವುದಿಲ್ಲ. ಆದ್ದರಿಂದ, ಎಸಿಬಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವಿದ್ದು, ಅವರು ವಿಚಾರಣೆ ಎದುರಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರ್ಜಿದಾರರು ಕೆಎಂಎಫ್ ಘಟಕದಡಿ ಬರುತ್ತಾರೆ. ಅದು ಸಾರ್ವಜನಿಕ ನಿಬಂಧನೆಗೆ ಒಳಪಟ್ಟಿದೆ. ಕೆಎಂಎಫ್ ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ಅದರ ಉದ್ಯೋಗಿಗಳೂ ಸರ್ಕಾರಿ ನೌಕರರೆಂದು ಪರಿಗಣಿಸಲ್ಪಡುತ್ತಾರೆ. ಆದ್ದರಿಂದ, ಅವರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಶೂನ್ಯ ಸಹನೆ ಅನಿವಾರ್ಯ: ಭ್ರಷ್ಟಾಚಾರ ಇಡೀ ದೇಶದ ಜನಜೀವನ ಆವರಿಸಿಕೊಂಡಿದೆ. ಸಾರ್ವಜನಿಕ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿ. ಸಮಾಜದಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹನೆ ಅನಿವಾರ್ಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?: ಖಚಿತ ಮಾಹಿತಿ ಆಧರಿಸಿ, ವಿ. ಕೃಷ್ಣಾರೆಡ್ಡಿ ವಿರುದ್ಧ 2021 ನ.20ರಂದು ಎಸಿಬಿ ದಾಳಿ ನಡೆಸಿತ್ತು. ನಿಗದಿತ ಆದಾಯಕ್ಕಿಂತ ಶೇ.107 ಆಸ್ತಿ ಹೊಂದಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ಕೃಷ್ಣಾರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.