

ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ರಾಜ್ಯದಲ್ಲಿನ ವರ್ಗಾವಣೆ ದಂಧೆಯೇ ಸಾಕ್ಷಿ. ಯಾದಗಿರಿ ಪಿಎಸ್ಐ ಪರಶುರಾಮ ಶುಕ್ರವಾರ ಸಂಜೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದರೆ, ಅವರು ವರ್ಗಾವಣೆಯಿಂದ ನೊಂದಿದ್ದರು ಮತ್ತು ಯಾದಗಿರಿ ನಗರದಲ್ಲೇ ಮುಂದುವರಿಯಲು 30 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಪರಶುರಾಮ ಕುಟುಂಬಸ್ಥರು ಆರೋಪಿಸಿದ್ದಾರೆ. ಜನಾಗ್ರಹಕ್ಕೆ ಮಣಿದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಪ್ರತಿಪಕ್ಷಗಳು ಈಗ ವರ್ಗಾವಣೆ ದಂಧೆ ಬಗ್ಗೆ ಮಾತನಾಡುತ್ತಿವೆಯಾದರೂ, ತಮ್ಮ ಅಧಿಕಾರಾವಧಿಯಲ್ಲಿ ವರ್ಗಾವಣೆ ದಂಧೆ ನಡೆದಿಲ್ಲ ಎಂಬುದನ್ನು ಎದೆ ತಟ್ಟಿಕೊಂಡು ಹೇಳುವ ಧೈರ್ಯ ಯಾವ ಪಕ್ಷಕ್ಕೂ ಇಲ್ಲ. ರಾಜ್ಯದಲ್ಲಿನ ವರ್ಗಾವಣೆ ಪ್ರಕ್ರಿಯೆ ಮೇಲೆ ಲಂಚಾವತಾರದ ಕಾಮೋಡ ಕಾಣಿಸಿಕೊಂಡಿರುವ ನಡುವೆಯೇ ನಗರಾಭಿವೃದ್ಧಿ (ಪೌರಾಡಳಿತ) ಇಲಾಖೆಯಲ್ಲೊಂದು ವಿಲಕ್ಷಣ ಸ್ಥಳ ನಿಯೋಜನೆ ಪ್ರಕ್ರಿಯೆ ಬೆಳಕಿಗೆ ಬಂದಿದೆ. ಇಲಾಖೆಯ ಹಿರಿಯ ಅಧಿಕಾರಿಗಳನ್ನು ದಿನದ ಮಟ್ಟಿಗೆ ಒಂದು ಸ್ಥಳಕ್ಕೆ ನಿಯುಕ್ತಿಗೊಳಿಸಿ ನಂತರದಲ್ಲಿ ಸರ್ಕಾರವನ್ನು ಸಂರ್ಪಸಬೇಕೆಂಬರ್ಥದ ಆದೇಶ ಹೊರಟಂತೆ ಕಾಣಿಸಿದೆ. ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಬಡ್ತಿ ನೀಡಿ, ಒಂದೊಂದು ಸ್ಥಳ ತೋರಿಸಿ ಒಂದೇ ದಿನದ ಮಟ್ಟಿಗೆ ನಿಯುಕ್ತಿಗೊಳಿಸಲಾಗಿದೆ. ನಂತರ ಮುಂದಿನ ಸ್ಥಳ ನಿಯುಕ್ತಿಗಾಗಿ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರಿ ನೌಕರರ ವರ್ಗಾವಣೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಒಂದು ದಂಧೆಯಾಗಿ, ಭ್ರಷ್ಟಾಚಾರದ ದೊಡ್ಡ ಮೂಲವಾಗಿ ಮಾರ್ಪಟ್ಟಿದೆ. ನೌಕರರನ್ನು ವರ್ಗಾವಣೆ ಮಾಡಲು ಮತ್ತು ಮಾಡದೇ ಇರಲು ಲಕ್ಷಾಂತರ ರೂಪಾಯಿ ಪೀಕುವ ಜಾಲ ಸಕ್ರಿಯವಾಗಿದೆ. ಇದರಲ್ಲಿ ರಾಜಕಾರಣಿಗಳು, ದಲ್ಲಾಳಿಗಳು, ಅಧಿಕಾರಿಗಳು ಎಲ್ಲರೂ ಶಾಮೀಲಾಗಿದ್ದಾರೆ ಎಂಬುದು ಬಹಿರಂಗ ರಹಸ್ಯ. ಹಣ ಕೊಡಲಾಗದೆ ಪರಿತಪಿಸುವ ನೌಕರರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಕೆಲವರು ಆತ್ಮಹತ್ಯೆಗೆ ಮುಂದಾಗುವ ಸ್ಥಿತಿಯೂ ಉದ್ಭವಿಸಿರುವುದು ದುರದೃಷ್ಟಕರ.
ಲಂಚ ಪಡೆಯದೆ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಅದೆಷ್ಟೋ ಸರ್ಕಾರಿ ನೌಕರರು ವರ್ಗಾವಣೆ ಮತ್ತು ಸ್ಥಳ ನಿಯೋಜನೆಗಾಗಿ ಲಂಚ ನೀಡುವಂಥ ಸ್ಥಿತಿ ಉದ್ಭವವಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರಾಮಾಣಿಕ ಸಿಬ್ಬಂದಿ, ಅಧಿಕಾರಿಗಳು ಈ ವರ್ಗಾವಣೆ ದಂಧೆಯಿಂದ ರೋಸಿಹೋಗಿದ್ದಾರೆ. ಕೆಳಹಂತದಿಂದ ಮೇಲ್ಮಟ್ಟದವರೆಗೆ ಲಂಚದ ಹಾವಳಿ ಹರಡಿಕೊಂಡಿದ್ದು, ಇವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ.
ವ್ಯವಸ್ಥೆ ಶುದ್ಧೀಕರಣ, ಭ್ರಷ್ಟಾಚಾರರಹಿತ ಆಡಳಿತದ ಬಗ್ಗೆ ರಾಜಕಾರಣಿಗಳಿಂದ ಭರವಸೆಗಳು ಪುಂಖಾನುಪುಂಖವಾಗಿ ಹೊಮ್ಮುತ್ತಲೇ ಇರುತ್ತವೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಎಷ್ಟು ತದ್ವಿರುದ್ಧವಾಗಿದೆ ಎಂಬುದನ್ನು ಗಮನಿಸಿದರೆ, ಇವರ ಮಾತು-ಕೃತಿಯಲ್ಲಿ ಭೂಮಿ-ಆಕಾಶದಷ್ಟು ವ್ಯತ್ಯಾಸವಿರುವುದು ತೋರುತ್ತದೆ. ಈ ವ್ಯವಸ್ಥೆಯನ್ನು ಸರ್ಕಾರ ಸರಿಪಡಿಸುತ್ತದೆ ಎಂದು ನಿರೀಕ್ಷಿಸುವುದು ಕೇವಲ ಭ್ರಮೆಯಾದೀತು. ಇಂಥ ಗಂಭೀರ ಸನ್ನಿವೇಶದಲ್ಲಿ ನ್ಯಾಯಾಂಗವೇ ಸ್ವಇಚ್ಛೆಯಿಂದ ಮಧ್ಯಪ್ರವೇಶಿಸಿ ವರ್ಗಾವಣೆ ಪಿಡುಗಿಗೆ, ಲಂಚದ ಹಾವಳಿಗೆ ಇತಿಶ್ರೀ ಹಾಡಬೇಕಾಗಿದೆ.