ಮುಂಜಾಗ್ರತೆ ವಹಿಸಿದರೆ ಸೋಂಕು ಹರಡುವಿಕೆಗೆ ತಡೆ

22tnp01mm
Published on

ತಿ.ನರಸೀಪುರ: ಕರೊನಾ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಹೊರಗಿನವರಿಗೆ ಮಾಹಿತಿ ನೀಡಿದರೆ ಮಾತ್ರ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ತಮ್ಮ ಕೊಠಡಿಯಲ್ಲಿ ಸೋಮವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೊರಗಿನಿಂದ ಬಂದ ವ್ಯಕ್ತಿ ಬಗ್ಗೆ ಮಾಹಿತಿ ದೊರಕಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಕರೊನಾ ಸೇನಾನಿಗಳನ್ನು ಬಳಸಿಕೊಂಡು ಗ್ರಾಮದ ಮುಖಂಡರ ನೆರವಿನಿಂದ ಮಾಹಿತಿ ಪಡೆದು ಹೊರಗಿನಿಂದ ಬಂದವರನ್ನು ಪರೀಕ್ಷಿಸುವ ಕೆಲಸವಾಗಬೇಕು. ಅಂತಹವರ ಪತ್ತೆಗೆ ತಂಡ ರಚಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಮಾಡುವುದರ ಜತೆಗೆ ಮಾಸ್ಕ್ ಧರಿಸಲು ಸೂಚಿಸಬೇಕು.ಮಾಸ್ಕ್ ಬಳಸದಿದ್ದಲ್ಲಿ ದಂಡ ವಿಧಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 11ರಿಂದ 1 ಗಂಟೆವರೆಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದೆ. ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚುವರಿ ಚಿಕಿತ್ಸೆಗೆ ಬಂದು ಪರೀಕ್ಷೆ ಮಾಡಿಕೊಳ್ಳಬಹುದು. ಕರೊನಾ ಲಕ್ಷಣ ಕಂಡು ಬಂದಲ್ಲಿ ಪರೀಕ್ಷಿಸಿಕೊಳ್ಳಬಹುದು, ಕಡ್ಡಾಯವಾಗಿ ಮೊಬೈಲ್ ಹಾಗೂ ಆಧಾರ್ ಕಾರ್ಡ್ ತರುವಂತೆ ತಿಳಿಸಿದರು

ತಹಸೀಲ್ದಾರ್ ಡಿ. ನಾಗೇಶ್, ಇಒ ಜೆರಾಲ್ಡ್ ರಾಜೇಶ್, ಪುರಸಭಾ ಮುಖ್ಯಾಧಿಕಾರಿ ಅಶೋಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net