

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಗೋವು ಕಳ್ಳ ಸಾಗಣೆಯನ್ನು ಸಂಪೂರ್ಣ ನಿಯಂತ್ರಿಸಲು ಮುಂದಾಗಿರುವ ಸರ್ಕಾರ, ಕಳ್ಳ ಸಾಗಣೆದಾರರ ಹೆಡೆಮುರಿ ಕಟ್ಟುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಗೋಹತ್ಯೆ ನಿಷೇಧ ಅಧಿನಿಯಮ ಜಾರಿಗೆ ಬಂದ ನಂತರ ಗೋವು ಕಳ್ಳ ಸಾಗಾಣಿಕೆದಾರರ ವಿರುದ್ಧ ಸರ್ಕಾರ ಯುದ್ದ ಸಾರಿದೆ.
ಜಾನುವಾರುಗಳನ್ನು ಅದರಲ್ಲೂ ಗೋವು ಹಾಗೂ ಗಂಡು ಕರುಗಳನ್ನು ಆಹಾರಕ್ಕಾಗಿ ಕಳ್ಳ ಸಾಗಣೆ ಮಾಡುವುದು ಅವ್ಯಾಹತವಾಗಿ ನಡೆಯುತ್ತಿತ್ತು. ಆದರೆ ಕಾಯ್ದೆ ಜಾರಿಯಾದ ಕೆಲವೇ ದಿನಗಳಲ್ಲಿ 40ಕ್ಕೂ ಹೆಚ್ಚು ಎಫ್ಐಆರ್ಗಳಾಗಿದ್ದು, ಸುಮಾರು 200ಕ್ಕೂ ಹೆಚ್ಚು ಜಾನುವಾರುಗಳು ರಕ್ಷಣೆಯಾಗಿ ಅಸ್ತಿತ್ವದಲ್ಲಿರುವ ಗೋಶಾಲೆಗಳಿಗೆ ಸಾಗಿಸಲ್ಪಟ್ಟಿವೆ.
ಕಾಯ್ದೆ ಬಂದಿದ್ದು: ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಠಿಣವಾದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೂ ಜಾನುವಾರು ಕಳ್ಳ ಸಾಗಣೆಗೆ ಬ್ರೇಕ್ ಬಿದ್ದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ತಂದಿದ್ದ ಕಾಯ್ದೆ ರದ್ದು ಮಾಡಿ 1956ರ ಹೆಚ್ಚು ಬಲವಿಲ್ಲದ ಕಾಯ್ದೆಯನ್ನು ಮುಂದುವರೆಸಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ಹೊಸ ಕಾಯ್ದೆಯನ್ನು ಇನ್ನಷ್ಟು ಬಲಯುತವಾಗಿ ರೂಪಿಸಿದೆ. ಅದಕ್ಕಾಗಿ ಉತ್ತರ ಪ್ರದೇಶ ಹಾಗೂ ಗುಜರಾತ್ಗಳಲ್ಲಿ ಅಧ್ಯಯನ ಮಾಡಲಾಗಿತ್ತು.
2021ರಲ್ಲಿ ವಿಧಾನಸಭೆಯಲ್ಲಿ ವಿಧೆಯಕ ಅಂಗೀಕಾರವಾದರೂ ವಿಧಾನ ಪರಿಷತ್ನಲ್ಲಿ ಆಗಿರಲಿಲ್ಲ. ಆದ್ದರಿಂದ ಸರ್ಕಾರ 2021ರ ಜನವರಿಯಲ್ಲಿ ಸುಗ್ರೀವಾಜ್ಞೆಯ ಮೂಲಕವೇ ಜಾರಿಗೆ ಮುಂದಾಗಿತ್ತು. ಆದರೆ ಫೆಬ್ರವರಿಯಲ್ಲಿ ವಿಧಾನ ಮಂಡಲ ಅಧಿವೇಶನದಲ್ಲಿ ಪರಿಷತ್ನಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತ್ತು.
4 ತಿಂಗಳಲ್ಲೇ ಪರಿಣಾಮ: ಕಾಯ್ದೆ ಜಾರಿಗೆ ಬಂದು ಕೇವಲ ನಾಲ್ಕು ತಿಂಗಳು ಮಾತ್ರ ಆಗಿದೆ. ಆದರೆ ಅಷ್ಟರಲ್ಲೇ ಪರಿಣಾಮಕಾರಿ ಅನುಷ್ಠಾನವಾಗುತ್ತಿದೆ. ಕೇವಲ ಕಳ್ಳ ಸಾಗಣೆ ಮಾತ್ರವಲ್ಲ, ವಧೆ ಮಾಡುವುದು, ಗೋವು ಮಾಂಸ ಸಾಗಾಟ ಮಾಡುವುದರ ಕಡೆಗೂ ಪೊಲೀಸರು ಹಾಗೂ ಪಶು ಸಂಗೋಪನಾ ಇಲಾಖೆ ತೀವ್ರ ಗಮನ ಹರಿಸಿ ಹದ್ದಿನ ಕಣ್ಣಿಟ್ಟು ನೋಡುತ್ತಿವೆ. ರಾಜ್ಯದ ಅರ್ಧದಷ್ಟು ಅಂದರೆ 15 ಜಿಲ್ಲೆಗಳಲ್ಲಿ ಜಾನುವಾರು ವಧೆ, ಕಳ್ಳ ಸಾಗಣೆ ಹಾಗೂ ಮಾಂಸ ಸಾಗಾಟ ಪ್ರಕರಣಗಳು ಕಂಡು ಬಂದಿವೆ. ಇಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕಾಗುತ್ತದೆ.
ಕಡಿಮೆ ಆಗುತ್ತಿದೆ ಪ್ರಕರಣ: ಜಾನುವಾರು ಪ್ರತಿಬಂಧಕ ಕಾಯ್ದೆ ಬಲಯುತವಾಗಿರುವ ಕಾರಣದಿಂದ ಗೋವುಗಳ ಕಳ್ಳ ಸಾಹಣೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ನೆರೆ ರಾಜ್ಯಕ್ಕೆ ಮಾಂಸ ಸಾಗಣೆ: ಜಾನುವಾರುಗಳ ಮಾಂಸವನ್ನು ರಾಜ್ಯದಿಂದ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೆ ಸಾಗಣೆ ಮಾಡುವ ಪ್ರಕರಣಗಳು ಸಹ ದಾಖಲಾಗಿವೆ. ಬೇರೆ ಬೇರೆ ರಾಜ್ಯಗಳಿಗೂ ಸಾಗಣೆಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಇನ್ನೂ ಪತ್ತೆ ಮಾಡಬೇಕಾಗಿದೆ. ಗಡಿ ಜಿಲ್ಲೆಗಳಿಂದ ರಫ್ತಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಲ್ಲೆಲ್ಲಿ ಪ್ರಕರಣ ದಾಖಲು
ರಾಮನಗರ ಜಿಲ್ಲೆಯಲ್ಲಿ ಒಂದು, ಉಡುಪಿ 2, ಶಿವಮೊಗ್ಗ 5, ಮಂಡ್ಯ 2, ಚಿಕ್ಕಮಗಳೂರು 4, ಬೀದರ್ 2, ದಕ್ಷಿಣ ಕನ್ನಡ 4, ಚಾಮರಾಜನಗರ 6, ತುಮಕೂರು 2, ಚಿತ್ರದುರ್ಗ 1, ವಿಜಯಪುರ 4, ಹಾಸನ 4, ದಾವಣಗೆರೆ 1, ಕೊಡಗು 1 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 1 ಎಫ್ಐಆರ್ ಜಾನುವಾರು ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ದಾಖಲಾಗಿವೆ. ಜಾನುವಾರು ವಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದರೆ, ಮಾಂಸ ಸಾಗಣೆಗೆ ಸಂಬಂಧಿಸಿದಂತೆ ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಪ್ರತಿ ಜಿಲ್ಲೆಗೂ ಒಂದು ಗೋಶಾಲೆ ತೆರೆಯುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಇದುವರೆವಿಗೂ ಸರ್ಕಾರದಿಂದ ಎಲ್ಲಿಯೂ ಗೋಶಾಲೆ ಆರಂಭ ವಾಗಿಲ್ಲ. ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳ ಪೈಕಿ 75ಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಸರ್ಕಾರದ ಗೋಶಾಲೆಗಳನ್ನು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಉದ್ಘಾಟನೆ ಮಾಡಲು ಸಿದ್ಧತೆ ನಡೆದಿದೆ. ಅದಕ್ಕಾಗಿ ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಗೋಹತ್ಯೆ ನಿಷೇಧ ಜಾರಿಗೆ ಬಂದ ನಂತರ ಪಶು ಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು ಗೋವುಗಳ ಅಕ್ರಮ ಸಾಗಣೆಯನ್ನು ನಿಯಂತ್ರಿಸುತ್ತಿವೆ. ಗೋವುಗಳ ವಧೆ ನಡೆಯದಂತೆ ನಿಗಾವಹಿಸಲಾಗಿದೆ. ಅಕ್ಟೋಬರ್ಗೆ ಗೋಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಲಾಗುತ್ತಿದೆ.
| ಪ್ರಭು ಚವ್ಹಾಣ್ ಪಶು ಸಂಗೋಪನೆ ಸಚಿವ