

ತಿರುವನಂತಪುರ: ಕೇಂದ್ರವು ವಿಧಿಸಿರುವ ಸೆಸ್ ಮತ್ತು ಸರ್ಚಾರ್ಜ್ಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ರಾಜ್ಯಗಳ ತೆರಿಗೆ ಪಾಲು ಕುಗ್ಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರತಿಪಾದಿಸಿದ್ದಾರೆ. 16ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ರ್ಚಚಿಸಲು ಕೇರಳ ಆಯೋಜಿಸಿದ್ದ ಬಿಜೆಪಿಯೇತರ ರಾಜ್ಯಗಳ ಸಮಾವೇಶ ದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.
ಹೆಚ್ಚುವರಿ ಶುಲ್ಕಗಳು ಮತ್ತು ಸೆಸ್ಗಳಲ್ಲಿನ ಏರಿಕೆಗೆ ಅನುಗುಣವಾಗಿ ಯೋಜನಾ ಆಯೋಗವು ರಾಜ್ಯಗಳ ತೆರಿಗೆ ಪಾಲನ್ನು ಶಿಫಾರಸು ಮಾಡಬೇಕು. ಕಳೆದ ಹಣಕಾಸು ಆಯೋಗವು ಶೇ. 41 ಪಾಲನ್ನು ರಾಜ್ಯಗಳಿಗೆ ಶಿಫಾರಸು ಮಾಡಿತ್ತು. ಆದರೆ ಈಗಿನ 16ನೇ ಹಣಕಾಸು ಆಯೋಗ ಈ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಕನಿಷ್ಠ ಶೇ. 50 ಮೊತ್ತವನ್ನು ನೀಡುವಂತೆ ಕೇರಳ ಸೇರಿ ಹಲವು ರಾಜ್ಯಗಳು ಈ ಹಿಂದೆಯೇ ಬೇಡಿಕೆ ಇಟ್ಟಿವೆ. ಈ ಬಾರಿಯಾದರೂ ಇದನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು. ಕೇಂದ್ರವು ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಬೇಕೆಂಬ ಬೇಡಿಕೆಯು ನಿರಂತರವಾಗಿ ಕೇಳಿಬರುತ್ತಿದೆ. ಕೇಂದ್ರ ಸರ್ಕಾರವು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ರಾಜ್ಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಸಮಾವೇಶ ನಡೆಸುತ್ತಿರುವುದು ಮಹತ್ವದ ಅಂಶವಾಗಿದೆ ಎಂದು ಸಿಎಂ ವಿಜಯನ್ ಹೇಳಿದರು.
ಉತ್ತಮ ಸ್ಥಿತಿಯಲ್ಲಿರುವ ಮತ್ತು ಹಿಂದುಳಿದ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯನ್ನು ಸಮತೋಲನಗೊಳಿಸ ಬೇಕು. ಆರೋಗ್ಯ, ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿದ ರಾಜ್ಯಗಳ ಅಗತ್ಯತೆಗಳನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು.
ಯಾರ್ಯಾರು ಭಾಗಿ?: ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಮತ್ತಿತರರಿದ್ದರು. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಡಾ. ಅರವಿಂದ್ ಸುಬ್ರಮಣಿಯನ್, ಕೇರಳದ ಮಾಜಿ ಹಣಕಾಸು ಸಚಿವ ಟಿ. ಎಂ. ಥಾಮಸ್ ಐಸಾಕ್, ಕೇರಳ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಪೊ› ವಿ.ಕೆ. ರಾಮಚಂದ್ರನ್ ಸೇರಿ ಹಲವರು ಪಾಲ್ಗೊಂಡಿದ್ದರು.
ಹದಗೆಡುತ್ತಿರುವ ಸಮತೋಲನ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹದಗೆಡುತ್ತಿರುವ ಸಮತೋಲನದ ಬಗ್ಗೆ ರಾಷ್ಟ್ರದ ಗಮನವನ್ನು ಸೆಳೆಯು ವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ 16ನೇ ಹಣಕಾಸು ಆಯೋಗಕ್ಕೆ ಜ್ಞಾಪಕ ಪತ್ರ ಸಲ್ಲಿಸಲಾಗುವುದು. ದೇಶದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯು ಈಗ ಬಿಕ್ಕಟ್ಟಿನಲ್ಲಿದೆ. ಬಹುತೇಕ ಎಲ್ಲಾ ರಾಜ್ಯಗಳು ಭಾರಿ ಹಣಕಾಸಿನ ಕೊರತೆಯಿಂದ ಬಳಲುತ್ತಿವೆ.ರಾಜ್ಯ ಸರ್ಕಾರಗಳು ಸಮಾಜದ ಅತ್ಯಂತ ವಂಚಿತ ವರ್ಗಗಳಿಗೆ ಸೌಲಭ್ಯಗಳನ್ನು ತಲುಪಿಸಲು ಹೆಣಗಾಡುತ್ತಿವೆ ಎಂದು ಕೇರಳ ಹಣಕಾಸು ಸಚಿವ ಬಾಲಗೋಪಾಲ್ ಹೇಳಿದರು. ಕೇಂದ್ರ ಸರ್ಕಾರವು ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳು, ಬಂಡವಾಳ ಹಿಂತೆಗೆತ, ಸಾರ್ವಜನಿಕ ಆಸ್ತಿಗಳಿಂದ ಹಣ ಗಳಿಕೆ, ಆರ್ಬಿಐ ಲಾಭಾಂಶ ಇನ್ನಿತರ ಮೂಲಗಳಿಂದ ಆದಾಯವನ್ನು ಕ್ರೋಢೀಕರಿಸುತ್ತಿದೆ. ಇದನ್ನು ರಾಜ್ಯಗಳ ಜತೆ ಹಂಚಿಕೊಳ್ಳುತ್ತಿಲ್ಲ ಎಂದು ಅವರು ಆರೋಪ ಮಾಡಿದರು.