

ಬೆಂಗಳೂರು: ಆಡಳಿತ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳು ಸರ್ಕಾರವನ್ನು ಮೇಲಿಂದ ಮೇಲೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇವೆ. ಇದೀಗ ಮತ್ತಷ್ಟು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬೇಕೆಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಆರಂಭವಾಗಿದೆ. ಸಿಎಂ ವಿರುದ್ಧ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ದನಿ ಎತ್ತಿದ ಪ್ರಕರಣ, ಸಚಿವ ಸುಧಾಕರ್ ವಿರುದ್ಧದ ಎ್ಐಆರ್ ದಾಖಲು ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಚಿವ ರಾಜಣ್ಣ ಅವರು ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕೆಂದು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಒಂದು ಡಿಸಿಎಂ ಹುದ್ದೆ ಸೃಷ್ಟಿಸಿದ್ದು, ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಣ್ಣ ಅವರ ಒತ್ತಾಯ ಪಕ್ಷದಲ್ಲಿ ಮಹತ್ವ ಪಡೆದುಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ತಮ್ಮ ಅಭಿಪ್ರಾಯ ಹಾಗೂ ಆ ನಿಟ್ಟಿನಲ್ಲಿ ನಡೆಸುವ ಪ್ರಯತ್ನದ ಬಗ್ಗೆ ವಿವರಿಸಿದರು.
ಲಿಂಗಾಯತ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಪತ್ರ ಬರೆಯಲು ರಾಜಣ್ಣ ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು. ಈ ಹಿಂದೆ ವಿಧಾನಸಭೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದೆವು, ಈಗ ಲೋಕಸಭಾ ಚುನಾವಣೆಗೂ ಹೆಚ್ಚಿನ ಸ್ಥಾನಗಳನ್ನ ಗೆಲ್ಲಬೇಕಾದರೆ ಮತ್ತೆ ಮೂವರಿಗೆ ಡಿಸಿಎಂ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಅವದ ವಾದವಾಗಿದೆ.
ಪತ್ರ ಬರೆಯುವ ಜತೆಗೆ ದೆಹಲಿಗೆ ತೆರಳಿ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲೂ ಸಹ ಬಯಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ರಾಜಣ್ಣ ಅವರ ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಸಿಎಂ ರೇಸ್‌ನಲ್ಲಿದ್ದ ಡಿ.ಕೆ ಶಿವಕುಮಾರ್‌ಗೆ ಅವಕಾಶ ಕೈ ತಪ್ಪಿದ್ದರಿಂದಲೇ ಡಿಸಿಎಂ ಸ್ಥಾನ ಸೃಜಿಸಿ ಅದನ್ನು ಅವರಿಗೆ ನೀಡಿ ಪ್ರಾಧಾನ್ಯತೆ ನೀಡಲಾಗಿದೆ. ಆ ಅಂಶ ಗೊತ್ತಿದ್ದೇ ಅವರ ಸಂಪುಟ ಸಹೋದ್ಯೋಗಿ ಮತ್ತೆ ಮೂರು ಡಿಸಿಎಂ ಸ್ಥಾನ ಸೃಜಿಸಬೇಕೆಂದು ಬಯಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ರೀತಿ ಮತ್ತೆ ಮೂರು ಡಿಸಿಎಂ ಸ್ಥಾನ ಸೃಜಿಸಿದರೆ ಡಿ.ಕೆ ಶಿವಕುಮಾರ್‌ಗೆ ನೀಡಿರುವ ಪ್ರಾಮುಖ್ಯತೆ ತಗ್ಗಲಿದೆ. ನಾಲ್ಕು ಮಂದಿಯಲ್ಲಿ ಅವರೂ ಒಬ್ಬರೆನಿಸಿಕೊಳ್ಳಲಿದ್ದಾರೆ. ಇಂತಹ ಬೇಡಿಕೆ ಅಥವಾ ರಾಜಕೀಯ ತಂತ್ರಗಾರಿಕೆಯ ಭಾಗವಾಗದಂತಿರುವ ಒತ್ತಾಯವನ್ನು ಡಿಕೆಶಿ ಯಾವ ರೀತಿ ಎದುರಿಸುತ್ತಾರೆಂಬ ಕುತೂಹಲವೂ ಇದೆ.
ಇದು ರಾಜಣ್ಣ ಬೇಡಿಕೆ ಮಾತ್ರವಾಗಿಲ್ಲ. ಎರಡು ತಿಂಗಳ ಹಿಂದಷ್ಟೇ ಮೂರ್ನಾಲ್ಕು ಮಂದಿಗೆ ಸಮುದಾಯವಾರು ಡಿಸಿಎಂ ಸ್ಥಾನ ನೀಡುವಂತೆ ಗೃಹ ಸಚಿವ ಪರಮೇಶ್ವರ್ ಕೂಡ ಒತ್ತಾಯಿಸಿದ್ದರು. ಪರಮೇಶ್ವರ್ ಸಲಹೆಗೆ ಎಂ.ಬಿ.ಪಾಟೀಲ್ ಕೂಡ ದನಿ ಗೂಡಿಸಿದ್ದರು.
ಇನ್ನು ಸತೀಶ್ ಜಾರಕಿಹೊಳಿ ಜತೆಗೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕಾಗಿತ್ತು ಎಂದು ಬಿ.ಕೆ.ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಕೆ.ಎನ್ ರಾಜಣ್ಣರಿಂದಲೂ ಮೂವರಿಗೆ ಉಪಮುಖ್ಯಮಂತ್ರಿಗಳನ್ನಾಗಿ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಸರ್ಕಾರ ರಚನೆ ಆರಂಭದ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಜಮೀರ್ ಅಹ್ಮದ್ ಅಭಿಪ್ರಾಯವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಯಾವುದೋ ಒಂದು ಸಮುದಾಯ ಪಕ್ಷವನ್ನು ಬೆಂಬಲಿಸಿಲ್ಲ. ಅಲ್ಪಸಂಖ್ಯಾತ ಸಮುದಾಯ ಪೂರ್ಣಪ್ರಮಾಣದಲ್ಲಿ ಜತೆಗೆ ನಿಂತಿರುವಾಗ ಕಡೆಗಣಿಸಬಾರದೆಂಬ ಸಲಹೆಯೂ ಕೇಳಿಬಂದಿತ್ತು.