ಶಾಸಕ ಯತ್ನಾಳ್ ಉಚ್ಚಾಟನೆಗೆ ಬಿಜೆಪಿ ನಿಷ್ಠರ ಒತ್ತಡ ತಂತ್ರ

IMG-20241201-WA0014
Published on

ಬೆಂಗಳೂರು: ರಾಜ್ಯದಲ್ಲಿ ಪಕ್ಷದ ಭವಿಷ್ಯ, ಸಂಘಟನೆ ಬಲವರ್ಧನೆ ದೃಷ್ಟಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ಒತ್ತಡ ಹೇರಲು ಬಿಜೆಪಿ ನಿಷ್ಠರು ತಂತ್ರ ರೂಪಿಸಿದ್ದಾರೆ.

ದಾವಣಗೆರೆಯಲ್ಲಿ ಹಾಲಿ, ಮಾಜಿ ಶಾಸಕರು, ಮುಖಂಡರು ಡಿ.10ರಂದು ಸಭೆ ಸೇರಿ, ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಲು ನಿರ್ಣಯಿಸಲಿದ್ದಾರೆ. ಅಲ್ಲದೆ, ಡಿ.12 ರಂದು ದೆಹಲಿಗೆ ನಿಯೋಗ ತೆರಳಿ ವರಿಷ್ಠರನ್ನು ಭೇಟಿಯಾಗುವ ಬಗ್ಗೆ ಇದೇ ಸಭೆಯಲ್ಲಿ ನಿರ್ಧರಿಸಲಿದ್ದಾರೆ.

ಕೋಲಾರ ಮತ್ತು ಮೈಸೂರು ಜಿಲ್ಲೆಯ ಪ್ರವಾಸ ಮಾಡಿದ ಮಾಜಿ ಸಚಿವರಾದ ಎಂ.ಪಿ‌.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ನೇತೃತ್ವದ ಪಕ್ಷ ನಿಷ್ಠರ ತಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯ 'ಧವಳಗಿರಿ' ನಿವಾಸಕ್ಕೆ ಭಾನುವಾರ ಧಾವಿಸಿತು.

ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ  ಅವರನ್ನು ಹಾಲಿ, ಮಾಜಿ ಶಾಸಕರು ಭೇಟಿಯಾಗಿ ವಕ್ಫ್ ವಿರುದ್ಧ ಮುಂದಿನ ಹೋರಾಟ ಹಾಗೂ ಪ್ರಸ್ತುತ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಪಕ್ಷದ ಸಂಘಟನೆ ಗಟ್ಟಿಗೊಳಿಸುವುದು, ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಗೊಳಿಸುವುದು, ವಕ್ಫ್ ನ ಸಮಸ್ಯೆಯ ನೈಜ ವರದಿ ತಯಾರಿಸಲು ಉದ್ದೇಶಿತ ಪಕ್ಷದ ರಾಜ್ಯ ನಾಯಕರ ಮೂರು ತಂಡಗಳ ಜತೆಗೂಡಿ ಜಿಲ್ಲಾ ಪ್ರವಾಸ ಕೈಗೊಳ್ಳುವ ಬಗ್ಗೆ ಮಾತುಕತೆಯಲ್ಲಿ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರಿಗೆ ಸಮಾಧಾನ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ದೇವಸ್ಥಾನ ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಗಿದೆ. ಈ ಪ್ರವಾಸದಲ್ಲಿ ಪಕ್ಷದ ಕಾರ್ಯಕರ್ತರು ಅತ್ಯಂತ ಸಂತೋಷದಿಂದ ಬರ ಮಾಡಿಕೊಂಡರು. ಜತೆಗೆ ಯತ್ನಾಳ್ ನಡೆ-ನುಡಿಗೆ ಬೇಸರ, ಆಕ್ರೋಶ ಹೊರ ಹಾಕಿದರು ಎಂಬ ವರದಿಯನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಈ ತಂಡ ಒಪ್ಪಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನಿರಂತರವಾಗಿ ಒಮ್ಮುಖದ ಟೀಕೆ, ವಾಗ್ದಾಳಿ ಕೇಳಿ ಸಾಕಾಗಿ ಹೋಗಿದೆ. ಸಂಘಟನೆ, ಕಾರ್ಯಕರ್ತರ ಬಗ್ಗೆ ಯಾರೂ ಯೋಚಿಸುತ್ತಿಲ್ಲವಲ್ಲ ಎಂಬ ಚಿಂತೆಗೀಡಾಗಿದ್ದೆವು. ನೀವು ಬಂದದ್ದು ಸಮಾಧಾನವಾಯಿತು.

ಪಕ್ಷದ ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದಾರೆ. ಟೀಕಿಸುವವರ ಕಡೆಗೆ ವರಿಷ್ಠರು ಇಲ್ಲವೆಂಬುದು ತಿಳಿದು ನೆಮ್ಮದಿ ತಂದಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದು, ಕೆಲವರು ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ವಿಚಲಿತರಾಗಬಾರದು ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿ ಬಂದಿದ್ದೇವೆ ಎಂದು ರೇಣಾಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net