ಡಿ.ಜೆ.ಹಳ್ಳಿ ಪ್ರಕರಣ ವಾಪಸ್ ಪಡೆಯಲು ಸರ್ಕಾರದ ಮೇಲೆ ಒತ್ತಡ

Roshan Baig
Published on

ಬೆಂಗಳೂರು: ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡ ಬೆನ್ನಲ್ಲೇ ಅಂತಹದ್ದೇ ಇನ್ನೊಂದು ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ಒತ್ತಡ ಬಂದಿದೆ!

ಹುಬ್ಬಳ್ಳಿ ಪ್ರಕರಣ ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹೋರಾಟ ನಡೆಸುತ್ತಿರುವ ನಡುವೆಯೇ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ ಮುನ್ನೆಲೆಗೆ ಬಂದಿದೆ.

ಡಿ.ಜೆ.ಹಳ್ಳಿ ಕೇಸ್ ಕೇಸ್ ವಾಪಸ್ ಪಡೆಯುವ ಕುರಿತು ಮಾಜಿ ಸಚಿವ ರೋಷನ್ ಬೇಗ್ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಹುಬ್ಬಳ್ಳಿ ಕೇಸ್ ವಾಪಸ್ ಪಡೆದ ರೀತಿಯಲ್ಲಿ ಡಿ.ಜೆ.ಹಳ್ಳಿ.ಕೆ.ಜಿ.ಹಳ್ಳಿ ಪ್ರಕರಣವನ್ನೂ ಸರ್ಕಾರ ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಗೃಹ ಸಚಿವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೋಷನ್ ಬೇಗ್, ಡಿ.ಜೆ.ಹಳ್ಳಿ ಪ್ರಕರಣದಲ್ಲಿ ನಾಲ್ಕು ವರ್ಷದಿಂದ ಅನೇಕ ಅಮಾಯಕರು ಜೈಲಿನಲ್ಲಿದ್ದಾರೆ. ಅವರು ಕಳ್ಳತನ ಮಾಡಿಲ್ಲ, ಡಕಾಯಿತಿ ಮಾಡಿಲ್ಲ. ಹಾಗಾಗಿ ಈ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವರ ಬಳಿ ಮಾತನಾಡಿದ್ದೇವೆ. ತಪ್ಪು ಮಾಡಿದವರನ್ನು ಬಿಡಬೇಡಿ. ಬೆಂಕಿ ಹಚ್ಚಿದವರನ್ನು ಬಿಡಬೇಡಿ. ಅಮಾಯಕರನ್ನು ಹೊರಗೆ ಬಿಡಿ ಎಂದು ಕೇಳಿದ್ದೇವೆ. ಪೊಲೀಸರು ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯಲಿ ಎಂದು ಹೇಳಿದರು.

ಕಾಂಗ್ರೆಸ್‌ಗೆ ವಾಪಸ್ ಬರುವ ಕುರಿತು ನಾನು ಪ್ರಯತ್ನ ಮಾಡುತ್ತಿಲ್ಲ. ಪಕ್ಷದಿಂದ ನನ್ನನ್ನು ಉಚ್ಚಾಟಿಸಿದ್ದಾರೆ. ರಿವೋಕ್ ಆಗಲಿದೆ ಆಮೇಲೆ ನೊಡೋಣ. ರಾಜಕಾರಣದಿಂದ ಹಿಂದೆ ಸರಿಯಲು ಆಗುತ್ತ್ತಾ? ಹಿಂದೆ ಸರಿಯಲು ಜನ ಬಿಡುತ್ತಾರಾ? ರಾಜಕಾರಣದಲ್ಲೇ ಇರಬೇಕಾಗುತ್ತದೆ.

-ರೋಷನ್ ಬೇಗ್, ಮಾಜಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net