

ಬೆಂಗಳೂರು: ಒಳ ಮೀಸಲು ಅನುಷ್ಠಾನಕ್ಕೆ ಆಯೋಗ ರಚಿಸುವುದಾಗಿ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ ಕಳೆದ ಹತ್ತು ದಿನಗಳಾದರು ತನ್ನ ನಿರ್ಧಾರ ಕಾರ್ಯರೂಪಕ್ಕೆ ತರದೇ ಇರುವುದಕ್ಕೆ ಆಡಳಿತ ಪಕ್ಷದಲ್ಲೇ ಸಣ್ಣ ಅಪಸ್ವರ ಶುರುವಾದ ಬೆನ್ನಲ್ಲೇ ಸರ್ಕಾರ ನಿವೃತ್ತ ನ್ಯಾಯಾಧೀಶರ ಆಯ್ಕೆಪ್ರಕ್ರಿಯೆ ಚುರುಕುಗೊಳಿಸಿದೆ.
ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪದೇಪದೇ ಒಳಮೀಸಲು ಒತ್ತಡ ಕಾಡಿದೆ. ವೇದಿಕೆ ಮೇಲೆ ದಲಿತ ಸಮುದಾಯದ ನಾಯಕರು ಒತ್ತಾಯ ಮಾಡುತ್ತಿದ್ದರೆ, ವೇದಿಕೆ ಕೆಳಗೆ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿದ್ದಿದೆ.
ಅ.28ರಂದು ನಡೆದ ಸಂಪುಟ ಸಭೆಯಲ್ಲಿ ಆಯೋಗ ರಚನೆ ಸಂಬಂಧ ನಿರ್ಣಯ ಕೈಗೊಂಡರೂ ಈ ವರೆಗೂ ಆಯೋಗಕ್ಕೆ ನೇಮಕ ಮಾಡಿಲ್ಲ ಎಂದು ವಿಜಯವಾಣಿ ಗುರುವಾರ ವಿಶೇಷ ವರದಿ ಮಾಡಿತ್ತು. ಜತೆಗೆ ದಲಿತ ಎಡಗೈ ಸಮುದಾಯದಲ್ಲಿ ಅಸಮಾಧಾನ ಮಡುಗಟ್ಟುತ್ತಿರುವುದರ ಬಗ್ಗೆಯೂ ಉಲ್ಲೇಖಿಸಲಾಗಿತ್ತು.
ಸಂಡೂರು ಚುನಾವಣೆ ಪ್ರಚಾರದ ವೇಳೆ ವಿಜಯವಾಣಿ ವರದಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದ ಮಾಜಿ ಸಚಿವ ಎಚ್.ಆಂಜನೇಯ, ಕೂಡಲೇ ಆಯೋಗ ರಚನೆ ಮಾಡಿ, ತಡ ಮಾಡುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ನಿವೃತ್ತ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಿಸಿದ್ದರು. ಇಬ್ಬರು ನಿವೃತ್ತ ನ್ಯಾಯಾಧೀಶರ ಹೆಸರು ಅಂತಿಮವಾಗಿದೆ ಎಂದು ಹೇಳಿಕೊಂಡಿದ್ದರು.
ಶುಕ್ರವಾರದ ಬೆಳವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಯವರು ಆಯೋಗಕ್ಕೆ ಪ್ರಸ್ತಾವನೆಯಾಗಿರುವ ನಿವೃತ್ತ ನ್ಯಾಯಾಧೀಶರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೇ ಏಕ ಸದಸ್ಯ ಆಯೋಗದ ಹೊಣೆ ನೀಡಲಾಗುತ್ತದೆ ಎಂಬ ಚರ್ಚೆಯೂ ಇದೆ.