ಟ್ರಸ್ಟ್ ಕಾರ್ಯಕ್ರಮಕ್ಕೆ ಕ್ರೀಡಾಂಗಣ ಕೊಟ್ಟವರ್‍ಯಾರು? -  ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನೆ

Published on

ಪುತ್ತೂರು: ಕೊಂಬೆಟ್ಟು ಕ್ರೀಡಾಂಗಣ ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ್ದು, ಕ್ರೀಡೆಗೆ ಮಾತ್ರ ಬಳಕೆಯಾಗಬೇಕು ತೀರ್ಮಾನಿಸಲಾಗಿತ್ತು. ಈಗ ಟ್ರಸ್ಟ್‌ನ ವೈಯಕ್ತಿಕ ಕಾರ್ಯಕ್ರಮಕ್ಕೆ ಕೊಟ್ಟವರು ಯಾರು? ಯಾವ ಷರತ್ತುಗಳನ್ನು ವಿಧಿಸಿ ನೀಡಲಾಗಿದೆ. ಪಕ್ಷಾತೀತ ಕಾರ್ಯಕ್ರಮವೆಂದು ಹೇಳಿಕೊಂಡಿದ್ದರೂ ಬಿಜೆಪಿಯ ಯಾರೊಬ್ಬರಿಗೂ ವೇದಿಕೆಗೆ ಆಮಂತ್ರಣ ನೀಡಿಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳು ಭಾಗವಹಿಸಿದ ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ೧೩ ಮಂದಿ ಆಸ್ಪತ್ರೆ ಸೇರಿದ್ದಾರೆ. ಸರ್ಕಾರ, ಗೃಹ ಇಲಾಖೆ, ಜಿಲ್ಲಾಡಳಿತ, ಕಾರ್ಯಕ್ರಮ ಸಂಯೋಜಿಸಿದ ಟ್ರಸ್ಟ್‌ನ ವೈಫಲ್ಯವೇ ಇದಕ್ಕೆ ಕಾರಣ. ೧೦ ಸಾವಿರ ಚೇರ್‌ಗಳನ್ನು ಹಾಕಿ ೨ ಸಾವಿರ ಚೇರ್ ರಿಸರ್ವ್ ಇರಿಸಿ ೧ ಲಕ್ಷ ಜನ ಸೇರುವ ಕಾರ್ಯಕ್ರಮ ನಡೆಸುವಾಗ ಇಲಾಖೆ ಎಲ್ಲಿತ್ತು? ಪೊಲೀಸ್ ಇಲಾಖೆ, ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ನಿಯಮಬಾಹಿರವಾಗಿ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ ಏನು ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಲೀಲಾವತಿ ಹಾಗೂ ಬಿಪಾತಿಮಾ ಎಂಬುವರು ಮಂಗಳವಾರವೂ ಆಸ್ಪತ್ರೆಯಲ್ಲೇ ಇದ್ದು, ಎಫ್‌ಐಆರ್ ಆಗಿದೆಯೇ? ಟ್ರಸ್ಟ್ ಮಾಡಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೇಗುಲದ ಜಾಗ ಬಳಕೆಗೆ ಅವಕಾಶವಿದೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಪುತ್ತೂರು ಶಾಸಕರು ಬಡವರನ್ನು ಅಪಮಾನಗೊಳಿಸಿ ಹಿಂಸೆ ನೀಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net