

ನವದೆಹಲಿ: ಕರೊನಾ ವೈರಸ್ ಪ್ರಸರಣದ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಸುಳ್ಳುಸುದ್ದಿಗಳು, ಸಂಬಂಧವೇ ಇಲ್ಲದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕರೊನಾ ನಿಯಂತ್ರಣದೊಂದಿಗೆ ಅದಕ್ಕೆ ಸಂಬಂಧಿಸಿದ ಫೇಕ್ ನ್ಯೂಸ್ಗಳನ್ನು ನಿಯಂತ್ರಿಸುವುದೂ ದೊಡ್ಡ ಸಾಹಸವೇ ಆಗುತ್ತಿದೆ. ಜನರನ್ನು ಪ್ಯಾನಿಕ್ ಮಾಡುವಂತಹ ಅನೇಕ ವಿಡಿಯೋಗಳು, ಫೋಟೋಗಳು, ಪೋಸ್ಟ್ಗಳು ನಿರಂತರವಾಗಿ ವೈರಲ್ ಆಗುತ್ತಲೇ ಇದೆ.
ಈ ಮಧ್ಯ ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಒಂದು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಕೊವಿಡ್-19 ಫ್ಯಾಕ್ಟ್ಚೆಕ್ ಘಟಕ (COVID-19 Fact Check Unit)ವನ್ನು ಸ್ಥಾಪಿಸಿದೆ. ಜನಸಾಮಾನ್ಯರೂ ಕೂಡ ಕರೊನಾಕ್ಕೆ ಸಂಬಂಧಪಟ್ಟಂತೆ ವೈರಲ್ ಆಗುವ ಯಾವುದೇ ವಿಚಾರದ ಬಗ್ಗೆ ಪಿಐಬಿಗೆ ಇ-ಮೇಲ್ ಮಾಡಿದರೆ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಲಿದೆ. ಅದು ಸುಳ್ಳೋ, ಸತ್ಯವೋ ಎಂಬುದನ್ನು ಸ್ಪಷ್ಟಪಡಿಸಲಿದೆ.
ಅಷ್ಟೇ ಅಲ್ಲ ಪಿಐಬಿ ಪ್ರತಿದಿನ ರಾತ್ರಿ 8 ಗಂಟೆಗೆ ಆ ದಿನದ ಕರೊನಾ ಹೆಲ್ತ್ಬುಲೆಟಿನ್ ಬಿಡುಗಡೆ ಮಾಡಲಿದೆ. ಇದರಲ್ಲಿ ಆಯಾ ದಿನದ ಕರೊನಾ ವೈರಸ್ ಸೋಂಕು ಪ್ರಸರಣದ ಬಗ್ಗೆ, ನಿಯಂತ್ರಣ ಸೇರಿ ಹಲವು ವಿಚಾರಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಕುರಿತು ಮಾಹಿತಿ ಇರಲಿದೆ. ಬುಧವಾರದಿಂದಲೇ ಇದು ಕಾರ್ಯರೂಪಕ್ಕೆ ಬಂದಿದ್ದು, ಮೊದಲ ಹೆಲ್ತ್ ಬುಲೆಟಿನ್ನ್ನು ನಿನ್ನೆ ಸಂಜೆ 6.30ಕ್ಕೆ ಪಿಐಬಿ ಬಿಡುಗಡೆ ಮಾಡಿದೆ.
ಕೊವಿಡ್-19 ವೈರಸ್ಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನವಿದ್ದರೂ ಪಿಐಬಿಯ ಫ್ಯಾಕ್ಟ್ಚೆಕ್ ಯುನಿಟ್ಗೆ ಮೇಲ್ ಕಳಿಸಬಹುದು. ಅದನ್ನು ಸೂಕ್ತ ತನಿಖೆಗೆ ಒಡ್ಡಿ, ಸತ್ಯಾಸತ್ಯತೆಯನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಂತ್ರಜ್ಞರ ತಂಡವೊಂದನ್ನು ರಚಿಸಿದೆ ಎಂದು ಪಿಐಬಿ ಹೇಳಿದೆ. (ಪಿಐಬಿ)