3 ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದರಿಂದ ಅಂಕಿತ; ಕೇಂದ್ರಕ್ಕೆ ಮತ್ತೊಂದು ಜಯ

President
Published on

ವದೆಹಲಿ: ತೀವ್ರ ವಿರೋಧದ ನಡುವೆಯೂ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ಸಹಿ ಹಾಕಿದರು.

ಕೃಷಿ ಸುಧಾರಣಾ ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾದಾಗಿನಿಂದ..ಅಂಗೀಕಾರವಾಗುವವರೆಗೂ ತೀವ್ರ ವಿರೋಧವೇ ವ್ಯಕ್ತವಾಗುತ್ತಿದೆ. ಇದೇ ವಿಚಾರಕ್ಕೆ ಶಿರೋಮಣಿ ಅಕಾಲ್ ದಳ ಎನ್​ಡಿಎ ಮೈತ್ರಿಕೂಟವನ್ನೇ ತೊರೆದಿದೆ. ರೈತ ವಿರೋಧಿ ಕಾಯ್ದೆ ಎಂದಿಗೂ ಜಾರಿಯಾಗಬಾರದು ಎಂದು ಆಗ್ರಹಿಸಿರುವ ಎಸ್​ಎಡಿ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಬಿಲ್​ಗೆ ಅಂಕಿತ ಹಾಕಬಾರದು ಎಂದೂ ಒತ್ತಾಯಿಸಿತ್ತು. ಛತ್ತೀಸ್​ಗಢ ಸಿಎಂ ಭೂಪೇಶ್ ಬಾಗೆಲ್ ಕೂಡ ರಾಷ್ಟ್ರಪತಿಯನ್ನು ಒತ್ತಾಯಿಸಿದ್ದರು.

ಸೆ.20ರಂದು ರಾಜ್ಯಸಭೆಯಲ್ಲಿ ಮೂರು ಕೃಷಿ ಸುಧಾರಣಾ ಮಸೂದೆಗಳು ಅಂಗೀಕಾರ ಆದಾಗಿನಿಂದಲೂ ದೇಶಾದ್ಯಂತ ರೈತರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆಯೂ 'ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020, ರೈತರ ಉತ್ಪಾದನಾ ವ್ಯಾಪಾರ-ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020ಕ್ಕೆ ರಾಷ್ಟ್ರಪತಿಯವರಿಂದ ಅನುಮೋದನೆ ಸಿಕ್ಕಿದೆ.

ನಿಯಮ ಉಲ್ಲಂಘನೆ?

ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಸೆ. 20ರಂದು ಧ್ವನಿಮತದಿಂದ ಅಂಗೀಕರಿಸಲಾಗಿದೆ. ಆದರೆ ಇದರಲ್ಲಿ ಕೆಲ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿರೋಧ ಪಕ್ಷಗಳು ಮತವಿಭಜನೆಗೆ ಕೋರಿದ ವೇಳೆ ಎಲ್ಲ ಸಂಸದರು ಅವರ ಆಸನದಲ್ಲಿ ಇದ್ದರು ಎಂಬುದು ಕಲಾಪದ ವಿಡಿಯೋ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಆದರೆ, ಮಸೂದೆ ಮೇಲಿನ ಚರ್ಚೆ ವೇಳೆಯಲ್ಲೇ ಸದನದಲ್ಲಿ ಗದ್ದಲವಾಯಿತು. ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸಿದ್ದರು ಎಂದು ಸರ್ಕಾರ ಹೇಳಿತ್ತು. ಗದ್ದಲ ನಡುವೆಯೇ ಧ್ವನಿ ಮತಕ್ಕೆ ಹಾಕಲು ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷ ಹರಿವಂಶ ಸಿಂಗ್ ಅನುಮತಿ ನೀಡಿದರು. ನಂತರ ಗದ್ದಲದ ಮಧ್ಯದಲ್ಲೇ ಧ್ವನಿಮತದಿಂದ ಅಂಗೀಕಾರವಾಗಿದೆ ಎಂದು ರೂಲಿಂಗ್ ನೀಡಿದರು.

ಕಾಯ್ದೆಯ ಮುಖ್ಯಾಂಶ
  • ರೈತರನ್ನು ಎಪಿಎಂಸಿ ಮಾರುಕಟ್ಟೆ ನಿರ್ಬಂಧದಿಂದ ಮುಕ್ತಗೊಳಿಸಿ, ಯಾವುದೇ ಮಾರುಕಟ್ಟೆಗಳಲ್ಲಿ ಉತ್ಪನ್ನ ಮಾರಾಟ ಮಾಡಲು ಅವಕಾಶ.
  • ಆನ್​ಲೈನ್ ಮೂಲಕ ರೈತರ ಉತ್ಪನ್ನಗಳ ವ್ಯವಹಾರ ನಡೆಸಲು ಒಪ್ಪಿಗೆ. ಇದಕ್ಕಾಗಿ ಪ್ರತ್ಯೇಕ ವೇದಿಕೆ ಅಸ್ತಿತ್ವಕ್ಕೆ ತರಲಾಗುತ್ತದೆ. ದೇಶದ ಯಾವುದೇ ಪ್ರದೇಶದಿಂದ ಆನ್​ಲೈನ್ ಮೂಲಕ ಖರೀದಿ- ಮಾರಾಟ ಮಾಡಬಹುದಾಗಿದೆ.
  • ವ್ಯಕ್ತಿ ಅಥವಾ ಸಂಸ್ಥೆ ಜತೆ ಬೆಳೆ ಬೆಳೆಯುವ ಮೊದಲೇ ಒಪ್ಪಂದ ಮಾಡಿಕೊಳ್ಳಲು ಅವಕಾಶ. ಇದರಿಂದ ರೈತರಿಗೆ ನಿಗದಿತ ಬೆಲೆ ಸಿಗಲಿದೆ.
ಪ್ರತಿಪಕ್ಷಗಳಿಂದ ವಿರೋಧ ಏಕೆ?
  • ಮಸೂದೆಗಳು ರೈತವಿರೋಧಿ ಎನ್ನುವುದು ಶಿರೋಮಣಿ ಅಕಾಲಿದಳ, ಪ್ರತಿಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳ ಟೀಕೆ.
  • ಕೃಷಿ ವಲಯದಲ್ಲಿ ಕಾರ್ಪೆರೇಟ್ ಕಂಪನಿಗಳು ಮೇಲುಗೈ ಸಾಧಿಸಲು ಈ ಮಸೂದೆಗಳು ನೆರವಾಗುತ್ತವೆ.
  • ಸರ್ಕಾರ ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲಬೆಲೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವ ಹುನ್ನಾರ
  • ಕಾರ್ಪೆರೇಟ್ ಕಂಪನಿಗಳು ಬೆಲೆ ನಿಗದಿ ಮಾಡುವ ಸಾಧ್ಯತೆ ಇರುವ ಕಾರಣ, ರೈತರಿಗೆ ಅನ್ಯಾಯವಾಗುವ ಸಂಭವ
  • ರೈತರಿಗೆ ಸಾಮಾಜಿಕ ಭದ್ರತೆ ಕೊರತೆ ಉಂಟಾಗಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net