Vice President Election: ಸಿ.ಪಿ ರಾಧಾಕೃಷ್ಣನ್​ಗೆ ಬೆಂಬಲ ನೀಡುವಂತೆ ಎಂ.ಕೆ. ಸ್ಟಾಲಿನ್ ಜೊತೆ ರಾಜನಾಥ್ ಸಿಂಗ್ ಮಾತುಕತೆ!

d4f11284-1363-44b3-8d41-c503ba7e1b58
Published on

Vice President Election: ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಬೆಂಬಲ ನೀಡುವಂತೆ ಕೋರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಸೇರಿದಂತೆ ಇತರೆ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ರಾಧಾಕೃಷ್ಣನ್ ಅವರ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಎನ್‌ಡಿಎ ಪ್ರಯತ್ನಗಳ ಭಾಗವಾಗಿ, ಪ್ರಮುಖ ವಿರೋಧ ಪಕ್ಷದ ನಾಯಕರೊಂದಿಗೆ ಸಮನ್ವಯ ಸಾಧಿಸಲು ಬಿಜೆಪಿ ನಾಯಕತ್ವವನ್ನು ರಾಜನಾಥ್ ಸಿಂಗ್ ಅವರಿಗೆ ವಹಿಸಲಾಗಿದೆ.

ಪಕ್ಷದ ಮೂಲಗಳು ಹೇಳುವಂತೆ ರಾಧಾಕೃಷ್ಣನ್ ಅವರ ಸುದೀರ್ಘ ರಾಜಕೀಯ ಜೀವನ ಮತ್ತು ರಾಜ್ಯಪಾಲರಾಗಿ ಅವರ ಕೊಡುಗೆಗಳ ಬಗ್ಗೆ ರಾಜನಾಥ್ ಸಿಂಗ್, ಸ್ಟಾಲಿನ್ ಅವರಿಗೆ ವಿವರಿಸಿದರು ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ತಮಿಳುನಾಡು ಮೂಲದ ಸಿ.ಪಿ ರಾಧಾಕೃಷ್ಣನ್ ಅವರನ್ನು ಇತ್ತೀಚೆಗೆ ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದರು.

ಸಿ.ಪಿ.ರಾಧಾಕೃಷ್ಣನ್ ಅವರು ತಮಿಳುನಾಡಿನ ಕೊಯಮತ್ತೂರಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ನಾಯಕತ್ವದಡಿ ಕೆಲಸ ಮಾಡಿದ ಅನುಭವವನ್ನು ಸಹ ಹೊಂದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿಯೊಂದಿಗಿನ ದೀರ್ಘಕಾಲದ ಒಡನಾಟಕ್ಕೆ ಹೆಸರುವಾಸಿಯಾದ ಅವರನ್ನು ಬಲವಾದ ಸಂಘಟನಾ ಕೌಶಲ್ಯ ಹೊಂದಿರುವ ನಾಯಕ ಎಂದು ಪರಿಗಣಿಸಲಾಗಿದೆ.

ರಾಧಾಕೃಷ್ಣನ್ ಅವರ ಉಮೇದುವಾರಿಕೆಯು ದಕ್ಷಿಣ ಭಾರತದ ನಾಯಕರನ್ನು ಪ್ರಮುಖ ಸಾಂವಿಧಾನಿಕ ಹುದ್ದೆಗಳೊಂದಿಗೆ ಗೌರವಿಸುವ ಎನ್‌ಡಿಎ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಡ್ಡಾ ಹೇಳಿದ್ದರು. ಜಗದೀಪ್ ಧನಕರ್ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಉಪರಾಷ್ಟ್ರಪತಿ ಹುದ್ದೆ ತೆರವಾಗಿತ್ತು. ಸೆಪ್ಟೆಂಬರ್ 9 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 22 ರವರೆಗೆ ಅವಕಾಶ ನೀಡಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net