

ನವದೆಹಲಿ: ಲಡಾಖ್ನಲ್ಲಿನ ವಾಸ್ತವ ಗಡಿರೇಖೆಯ ಬಳಿ ಭಾರತ ಮತ್ತು ಚೀನಾ ಯೋಧರು ಯುದ್ಧಸನ್ನದ್ಧರಾಗಿ ಪರಸ್ಪರ ಬಿರುಗಣ್ಣಿನ ನೋಟ ಬೀರುತ್ತಾ ಕುಳಿತಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಯುದ್ಧ ಸ್ಫೋಟಿಸಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದರ್ಥದಲ್ಲಿ ನೋಡಿದರೆ 2017ರಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಡೊಕ್ಲಾಮ್ ಬಿಕ್ಕಟ್ಟಿಗಿಂತ ಈ ಬಾರಿಯ ಬಿಕ್ಕಟ್ಟ ಬಹುದೊಡ್ಡದಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ತನ್ನ ಭಾಗದಲ್ಲಿ 5 ಸಾವಿರಕ್ಕೂ ಹೆಚ್ಚು ಯೋಧರನ್ನು ಜಮಾವಣೆ ಮಾಡಿದೆ. ಜತೆಗೆ ಬಂಕರ್ಗಳನ್ನು ನಿರ್ಮಿಸಲು ಬೃಹತ್ ಯಂತ್ರೋಪಕರಣಗಳನ್ನೂ ತಂದಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಯೋಧರ ನಿಯೋಜನೆಯನ್ನು ಹೆಚ್ಚಿಸಿದೆ. ಪ್ರತಿಕೂಲ ಪರಿಸ್ಥಿತಿ ಹೊರತಾಗಿಯೂ ಭಾರತ ಈ ಕ್ರಮ ಕೈಗೊಂಡಿದೆ ಎಂದು ಭಾರತೀಯ ಸೇನಾಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಂದು ಕಡೆ ಮಾತ್ರವಲ್ಲ. ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಅಂದರೆ ಗಾಲ್ವಾನ್ ಕಣಿವೆಯ ಡಾರ್ಬುಕ್-ಶಯಾಕ್-ದೌಲತ್ ಬೇಗ್ ಓಲ್ಡೀ ರಸ್ತೆಯಲ್ಲಿರುವ ಭಾರತೀಯ ಶಿಬಿರ ಕೆಎಂ120 ಸೇರಿ ಹಲವು ಆಯಕಟ್ಟಿನ ಜಾಗದಲ್ಲಿ ಚೀನಿ ಯೋಧರು ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ.
ಚೀನಾದ ಈ ಅತಿಕ್ರಮಣ ತುಂಬಾ ಗಂಭೀರ ಸ್ವರೂಪದ್ದಾಗಿದೆ. ಇದು ಸಾಮಾನ್ಯ ರಿತಿ ಅತಿಕ್ರಮಣದಂತೆ ತೋರುತ್ತಿಲ್ಲ ಎಂದು ಮಾಜಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ತಿಳಿಸಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಯಾವುದೇ ವಿವಾದಗಳಿಲ್ಲದಿದ್ದರೂ ಚೀನಿ ಯೋಧರು ಈ ಪ್ರದೇಶದಲ್ಲಿ ಅತಿಕ್ರಮಣ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ವ್ಯೂಹಾತ್ಮಕ ವ್ಯವಹಾರಗಳ ತಜ್ಞ ರಾಜತಾಂತ್ರಿಕ ಅಶೋಕ್ ಕೆ ಕಾಂತಾ ಕೂಡ ಡಿ.ಎಸ್. ಹೂಡಾ ಅವರ ಮಾತುಗಳನ್ನೇ ಪುನರುಚ್ಚರಿಸಿದ್ದಾರೆ. ಇದು ಸಾಮಾನ್ಯ ಅತಿಕ್ರಮಣದಂತೆ ತೋರುತ್ತಿಲ್ಲ. ಅಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ, ಚಿಂತೆಗೀಡು ಮಾಡುವಂತಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಈ ಬಿಕಟ್ಟನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ರಾಜಕೀಯ ಹಾಗೂ ರಾಜತಾಂತ್ರಿಕ ಪ್ರಯತ್ನಗಳನ್ನು ತಕ್ಷಣವೇ ಆರಂಭಿಸುವುದು ಒಳಿತು. ಇಲ್ಲವಾದರೆ ಇದು ಡೊಕ್ಲಾಮ್ ಬಿಕ್ಕಟ್ಟಿಗಿಂತ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೇ 5ರಂದು ಪೂರ್ವ ಲಡಾಖ್ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಭಾರತ ಮತ್ತು ಚೀನಾ ಯೋಧರು ಪರಸ್ಪರ ಘರ್ಷಣೆಗೆ ಇಳಿದಿದ್ದರು. ಇದು ಮರುದಿನವೂ ಮುಂದುವರಿದಿತ್ತು. ಈ ಘಟನೆಯಲ್ಲಿ ಎರಡೂ ಕಡೆಯ 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಆದರೆ, ಸ್ಥಳೀಯ ಕಮಾಂಡರ್ಗಳ ಮಟ್ಟದ ಸಭೆಯ ಬಳಿಕ ಪರಿಸ್ಥಿತಿ ತಿಳಿಗೊಂಡಿತ್ತು.
ಪ್ಯಾಂಗಾಂಗ್ ತ್ಸೊನಲ್ಲಿನ ಈ ಘರ್ಷಣೆಯ ಬಳಿಕ ಉತ್ತರ ಸಿಕ್ಕಿಂನಲ್ಲಿ ಕೂಡ ಇದೇ ರೀತಿಯ ಘರ್ಷಣೆ ಪುನರಾವರ್ತನೆಗೊಂಡಿತ್ತು. ಈ ಘರ್ಷಣೆಗಳು ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿವೆ.