

ಕರೊನಾ ಎರಡನೇ ಅಲೆ ತೀವ್ರವಾಗಿ ವ್ಯಾಪಿಸಿದ್ದರಿಂದ ಸೋಂಕಿನ ಸರಪಳಿ ಮುರಿಯಲು ಲಾಕ್ಡೌನ್ ವಿಧಿಸುವುದೇ ಅಗತ್ಯ ಎಂಬ ಆರೋಗ್ಯ ತಜ್ಞರ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಿತು. ಮೇ 23ರ ರಾತ್ರಿ ಕೊನೆಯಾಗಬೇಕಿದ್ದ ಲಾಕ್ಡೌನ್ ಸೋಂಕು ಪ್ರಕರಣ ಕಡಿಮೆಯಾಗದೆ ಇರುವುದರಿಂದ ಜೂನ್ 7ರವರೆಗೆ ವಿಸ್ತರಿಸಲಾಗಿದೆ. ಈಗಿನ ಪರಿಸ್ಥಿತಿಯನ್ನು ಎದುರಿಸಲು ಲಾಕ್ಡೌನ್ ಪ್ರಬಲ ಅಸ್ತ್ರ ಎಂಬುದು ನಿಜವೇ. ಆದರೆ, ಇದರಿಂದ ಬಡವರು, ಕೆಳಮಧ್ಯಮ ವರ್ಗ ಮತ್ತು ಮಧ್ಯಮವರ್ಗದವರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿರುವ ಪರಿಣಾಮ ಜನಸಾಮಾನ್ಯರಿಗೆ ವೈಯಕ್ತಿಕ ಆದಾಯ ಕೈತಪ್ಪಿ ಹೋಗಿದ್ದರೆ, ಸರ್ಕಾರಕ್ಕೆ ತೆರಿಗೆ, ಇತರ ಆರ್ಥಿಕ ಸಂಪನ್ಮೂಲಗಳಿಲ್ಲದೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕಗೊಂಡಿದೆ.
ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ ಪರಿಣಾಮ ಏಪ್ರಿಲ್ 27ರಿಂದ ಮೇ 23ರ ನಡುವಿನ ಅವಧಿಯಲ್ಲಿ -ಠಿ; 5 ಸಾವಿರ ಕೋಟಿ ರೂ. ಆದಾಯ ನಷ್ಟ ಅಂದಾಜಿಸಲಾಗಿದೆ. ಹಾಗಾಗಿ, 2021-22ನೇ ಆರ್ಥಿಕ ವರ್ಷದ ಮೊದಲ ತಿಂಗಳಲ್ಲೇ ಭಾರಿ ನಷ್ಟ ಎದುರಿಸುವಂತಾಗಿದೆ. ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒರತೆ ಬತ್ತಿ ಹೋಗಿರುವುದರಿಂದ, ಬೊಕ್ಕಸಕ್ಕೆ ತೀವ್ರ ಹಾನಿಯಾಗಿದೆ. ರಾಜ್ಯದ ಸ್ವಂತ ಮೂಲಗಳ ರಾಜಸ್ವ ಸಂಗ್ರಹದ ಮೇಲೆ ಕರೊನಾ ದುಷ್ಪರಿಣಾಮ ಬೀರಿರುವುದನ್ನು ವಿತ್ತೀಯ ತಜ್ಞರು ಒಪ್ಪಿಕೊಂಡಿದ್ದಾರೆ. ಜೂನ್ 7ರವರೆಗೆ ಲಾಕ್ಡೌನ್ ಮುಂದುವರಿದಿರುವುದರಿಂದ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಹೀಗಾಗಿ ಲಾಕ್ಡೌನ್ ತೆರವುಗೊಂಡ ನಂತರದ ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಲಾಕ್ಡೌನ್ ತೆರವುಗೊಂಡ ಬಳಿಕ ಚೇತರಿಕೆಯ ಕ್ರಮಗಳನ್ನು ಕ್ಷಿಪ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಕೈಗೊಳ್ಳಬೇಕಿದೆ.
ಉದ್ಯಮ ವಲಯ ಅದರಲ್ಲೂ ಸಣ್ಣ, ಮಧ್ಯಮ ಕೈಗಾರಿಕೆಗಳು ಹಲವು ಸವಾಲು ಎದುರಿಸುತ್ತಿವೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಯಾಗಿರುವುದರಿಂದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಚ್ಚಾವಸ್ತುಗಳ ಅಲಭ್ಯತೆಯಿಂದ, ಉತ್ಪಾದನಾ ರಂಗದ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಅಲ್ಲದೆ, ಹಲವು ವಲಯಗಳ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಕುಸಿಯುವುದರಿಂದ, ಮಾರುಕಟ್ಟೆಯಲ್ಲಿ ಅಂಥ ಉತ್ಪನ್ನಗಳ ಲಭ್ಯತೆ ಕಡಿಮೆ ಆಗುವುದಲ್ಲದೆ ಬೆಲೆಯೂ ಏರುಮುಖ ಕಾಣುತ್ತದೆ. ಈಗಾಗಲೇ ಕರೊನಾದ ಹೊಡೆತ, ಉದ್ಯೋಗನಷ್ಟ, ಸಂಬಳಕಡಿತದಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಬೆಲೆಏರಿಕೆಯ ಬರೆ ಇನ್ನಷ್ಟು ಸಂಕಷ್ಟ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗದಂತೆ ನಿಗಾ ವಹಿಸಬೇಕಿದೆ. ಕೈಗಾರಿಕಾ ಅಗತ್ಯಗಳನ್ನು ಪೂರೈಸಲು, ಮುಖ್ಯವಾಗಿ ಕಚ್ಚಾವಸ್ತುಗಳ ಪೂರೈಕೆ ಅಬಾಧಿತವಾಗಿರುವಂತೆ ನೋಡಿಕೊಳ್ಳಲು ಆದ್ಯತೆ ನೀಡಬೇಕು. ಲಾಕ್ಡೌನ್ ಬಳಿಕ ಉದ್ಯಮ ರಂಗ ಸೇರಿ ಎಲ್ಲ ವಲಯಗಳಲ್ಲೂ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುವಂತೆ ದೂರದೃಷ್ಟಿಯ ಕ್ರಮಗಳನ್ನು ಕೈಗೊಳ್ಳಬೇಕು. ಕರೊನಾ ಹೊಡೆತದಿಂದ ಪಾರಾಗುವುದು ಎಷ್ಟು ಸವಾಲಿನಿಂದ ಕೂಡಿದೆಯೋ, ಆರ್ಥಿಕ ವಿಪತ್ತಿನಿಂದ ಹೊರಬರುವುದೂ ಅಷ್ಟೇ ಸವಾಲಿನದ್ದಾಗಿದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸೂಕ್ತ ಮತ್ತು ಸಕಾಲಿಕ ಹೆಜ್ಜೆ ಇರಿಸುವಂತಾಗಲಿ.