

ಬೆಂಗಳೂರು: ದೇಶದಲ್ಲಿ ಮತೀಯ ಗಲಭೆ, ಶಾಂತಿ ಕದಡಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಚು ರೂಪಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಕಾರ್ಯಾಚರಣೆ ಮುಂದುವರಿದೆ. ಕರ್ನಾಟಕ ಸೇರಿ ದೇಶದ ಐದು ರಾಜ್ಯಗಳಲ್ಲಿ 14 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ.
ಭಾರತದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ನಿಟ್ಟಿನಲ್ಲಿ ಪಿತೂರಿ ನಡೆಸುತ್ತಿರುವ ಪಿಎಫ್ಐ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಭಾನುವಾರ ಬೆಳಗ್ಗೆ ಕರ್ನಾಟಕದ ದಕ್ಷಿಣ ಕನ್ನಡ, ಕೇರಳದ ಕಣ್ಣೂರು, ಮಲಪ್ಪುರಂ, ಮಹಾರಾಷ್ಟ್ರದ ನಾಸಿಕ್, ಕೊಲ್ಹಾಪುರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್,ಬಿಹಾರದ ಕತಿಹಾರ್‌ಗಳಲ್ಲಿ ಶೋಧ ನಡೆಸಿದೆ. ಕೆಲವೊಂದು ಡಿಜಿಟಲ್ ಉಪಕರಣಗಳು ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಯೋತ್ಪಾದನೆ, ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ 2047ರ ವೇಳೆಗೆ ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ ಪಿಎಫ್‌ಐ ಸೇನೆ ಸ್ಥಾಪಿಸಬೇಕೆಂದು ನಿಷೇಧಿತ ಸಂಘಟನೆ ಪಿಎಫ್ಐ ತಯಾರಿ ನಡೆಸುತ್ತಿದೆ. ಉನ್ನತ್ತ ನಾಯಕತ್ವ ಮತ್ತು ಸಶಸ ಕೇಡರ್ ರಚಿಸಿ ಪಿಎಫ್ಐ ಸೇನೆಯನ್ನು ಬೆಳೆಸುವ ಮತ್ತು ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದು ಎನ್‌ಐಎ ದೇಶದ ಎಲ್ಲೆಡೆ ಕಾರ್ಯಾಚರಣೆ ನಡೆಸಿ ಪಿಎಫ್ಐ ಸೇವೆಯನ್ನು ಎಡೆಮುರಿ ಕಟ್ಟುತ್ತಿದೆ. ಸಮಾಜದಲ್ಲಿ ಕೆಲ ವರ್ಗಗಳ ವಿರುದ್ಧ ಹೋರಾಟ ನಡೆಸಲು ತನ್ನ ಹಿಂಸಾತ್ಮಕ ಭಾರತ, ವಿರೋಧಿ ಅಜೆಂಡಾವನ್ನು ಮುಂದುವರಿಸುವ ಪಿಎಫ್ಐ ಮುಸ್ಲಿಂ ಯುವಕರಿಗೆ ಉಗ್ರವಾದ ಬೋಧನೆ ಮಾಡುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಶಸಾಸ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಿದೆ.
ಇದಕ್ಕಾಗಿ ಪಿಎಫ್ಐ ಹಲವು ಮಟ್ಟದಲ್ಲಿ ತರಬೇತಿದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಡ್, ಕತ್ತಿಗಳು ಮತ್ತು ಚಾಕುಗಳ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ. ಮೂಲಭೂತವಾದವನ್ನು ಬೋಧನೆ ಮತ್ತು ಶಸಾಸ ತರಬೇತಿ ನೀಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗುಪ್ತಚರ, ತನಿಖಾ ವಿಶ್ಲೇಷಣೆಯಿಂದ ಹಲವು ತಿಂಗಳಿಂದ ಮಾಹಿತಿ ಕಲೆ ಹಾಕಿ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.