

ಬೆಂಗಳೂರು: ಪ್ರಕೃತಿ, ಪರಿಸರ, ಅರಣ್ಯ ನಾಶವಾಗದಂತೆ ಪ್ರವಾಸೋದ್ಯಮ ಹಾಗೂ ಪರಿಸರ ಪ್ರವಾಸೋದ್ಯಮದ ವಿಪುಲ ಅವಕಾಶ ಬಳಕೆಗೆ ಪರಿಸರ ಪ್ರವಾಸೋದ್ಯಮಕ್ಕೆ ಹೊಸ ನೀತಿ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಇಲಾಖೆ ಕಚೇರಿಯಲ್ಲಿ ಶನಿವಾರ ಕರೆದಿದ್ದ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜತೆಗೂಡಿ ಸಾಹಸ ಪ್ರವಾಸೋದ್ಯಮವನ್ನು ಪರಿಸರ ಪ್ರವಾಸೋದ್ಯಮದ ಭಾಗವಾಗಿಸಲು ಸಾಧ್ಯವಿದ್ದು, ಹೆಚ್ಚು ಜನರನ್ನು ಆಕರ್ಷಿಸಲಿದೆ ಎಂದರು.
ರಿವರ್ ರಾಫ್ಟಿಂಗ್, ಚಾರಣ, ಅರಣ್ಯ ಪ್ರದೇಶದೊಳಗೆ ಇರಬಹುದಾದ ತಾಣಗಳನ್ನು ಗುರುತಿಸಿ ಪರಿಸರ ಪ್ರವಾಸೋದ್ಯಮ ವಿಸ್ತರಿಸಲು ಸಾಧ್ಯವಿದೆ. ಎಲ್ಲ ಅವಕಾಶಗಳನ್ನು ಗುರುತಿಸುವ ಮೂಲಕ ಹೆಚ್ಚೆಚ್ಚು ಜನರನ್ನು ಸೆಳೆದು, ಆಸಕ್ತಿ ಬೆಳೆಸಲು ನೆರವಾಗುತ್ತದೆ ಎಂದರು.
ಹೊಸ ನೀತಿಗೆ ಸಂಬಂಧಿಸಿದಂತೆ ಪರಿಸರ ತಜ್ಞರು, ಪ್ರವಾಸೋದ್ಯಮ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತಿತರ ಬಾಧ್ಯಸ್ಥರೊಂದಿಗೆ ಚರ್ಚಿಸಿ ಕರಡು ಪ್ರಸ್ತಾವನೆ ಸಲ್ಲಿಸಲು ಇಲಾಖೆ ಅಧಿಕಾರಿಗಳಿಗೆ ಖಂಡ್ರೆ ಸೂಚಿಸಿದರು.
ರಾಜ್ಯದಲ್ಲಿ 300 ಕಿ.ಮೀ.ಗೂ ಕರಾವಳಿ ಪ್ರದೇಶವಿದೆ. ಕಡಲ ತಡಿಯ ಪ್ರವಾಸೋದ್ಯಮ ವಿಭಿನ್ನ, ಸಾಮರ್ಥ್ಯ ಅಗಾಧವಾಗಿದೆ. ಈ ಅವಕಾಶಗಳ ಬಳಕೆಗೆ ಹೆಚ್ಚಿನ ಹಣಕಾಸಿನ ಹೂಡಿಕೆಯ ಬಲವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಆಕರ್ಷಿಸಲು ಬೇಕಾದ ಅಂಶಗಳನ್ನು ವರದಿಯಲ್ಲಿ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.