

ಶಿವಮೊಗ್ಗ: ಇದೇ ವರ್ಷ ನವೆಂಬರ್‌ನಲ್ಲಿ ಭಗವದ್ಗೀತಾ ಅಭಿಯಾನದ ರಾಜ್ಯ ಮಟ್ಟದ ಸಮರ್ಪಣಾ ಸಮಾವೇಶವನ್ನು ಶಿವಮೊಗ್ಗ ನಗರದಲ್ಲಿ ಆಯೋಜಿಸುವ ಅವಕಾಶ ದೊರಕಿದ್ದು ಈ ಭಾಗದ ಜನರ ಸುಯೋಗ ಎಂದು ಭಗವದ್ಗೀತಾ ಅಭಿಯಾನ ಸಮಿತಿಯ ರಾಜ್ಯ ಗೌರವಾಧ್ಯಕ್ಷ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ ನಗರದ ಶೃಂಗೇರಿ ಶಂಕರ ಮಠದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯು ಆಯೋಜಿಸಿದ್ದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಸಂಯುಕ್ತವಾಗಿ 2007ರಿಂದ ಈ ಮಹತ್ತರ ಕಾರ್ಯವನ್ನು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಈ ಬಾರಿ ಸ್ವರ್ಣವಲ್ಲೀ ಶ್ರೀಗಳೇ ದೇವರ ರೂಪದಲ್ಲಿ ಬಂದು ಈ ಬಾರಿಯ ಅಭಿಯಾನದ ರಾಜ್ಯ ಸಮಾವೇಶವನ್ನು ಶಿವಮೊಗ್ಗದಲ್ಲಿ ಆಯೋಜಿಸುವಂತೆ ಸೂಚಿಸಿರುವುದಕ್ಕೆ ಧನ್ಯತಾ ಭಾವ ಹೊಂದಿದ್ದೇನೆ. ಭಗವದ್ಗೀತೆ ಪಠಣ ಎಂದರೆ ಒಂದು ರೀತಿಯಲ್ಲಿ ಅದು ಬ್ರಾಹ್ಮಣರಿಗೆ ಸಂಬಂಧಿಸಿದ್ದು ಎಂಬ ತಪ್ಪು ಕಲ್ಪನೆಯಿದೆ. ಇದನ್ನು ಹೋಗಲಾಡಿಸಲು ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲ ಸಮಾಜದವರನ್ನು ಒಂದೆಡೆ ಸೇರಿಸಲಾಗುವುದು ಎಂದು ಹೇಳಿದರು.
ಭಗವದ್ಗೀತೆಯ 11ನೇ ಅಧ್ಯಾಯದ ಪಠಣ, ಇದರ ವಿಶೇಷತೆ, ಪ್ರಯೋಜನಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿ, ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿ, ಅಧ್ಯಾಪಕರನ್ನು ಸಂಪರ್ಕಿಸಿ ಪ್ರಸ್ತುತ ಮಕ್ಕಳ ಸಂಸ್ಕಾರಯುತ ಶಿಕ್ಷಣಕ್ಕೆ ಅವಶ್ಯಕವಾಗಿರುವ ಭಗವದ್ಗೀತಾ ಪಠಣ, ಅಭಿಯಾನದ ಮಹತ್ವದ ಬಗ್ಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಶಿವಮೊಗ್ಗದಲ್ಲಿ ಅಭಿಯಾನದ ಸಮರ್ಪಣಾ ಸಮಾವೇಶವನ್ನು ನಮಗೆ ಮಾಡಲು ಶ್ರೀಗಳು ಸೂಚನೆ ಕೊಟ್ಟಿದ್ದು ಅದನ್ನು ಆದೇಶವೆಂದು ಭಾವಿಸೋಣ. ಪರಮ ಪೂಜ್ಯರು ಆದೇಶಿಸಿರುವ ಎಲ್ಲ ಸಂಗತಿಗಳನ್ನು ಪಾಲಿಸೋಣ ಎಂದ ಅವರು ಅಭಿಯಾನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ಅಭಿಯಾನದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಕ್ತಿ ನಿರ್ಮಾಣ, ಸಂಸ್ಕೃತಿ ಅನುಷ್ಠಾನದಲ್ಲಿ ಹಿಂದೆ ಬಿದ್ದಿದ್ದೇವೆ. ಮಕ್ಕಳಿಗೆ ಭಗವದ್ಗೀತೆ ಪಠಣ ಅತ್ಯಗತ್ಯವಾಗಿದೆ. ಸಮಾಜ ಸೇವೆ ಮಾಡುವವರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.
ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಜಿ.ಭಟ್ಟ ಮಾತನಾಡಿ, ಅಭಿಯಾನದ ಸಮಾರೋಪದಲ್ಲಿ ಸುಮಾರು 25 ಸಾವಿರ ಜನ ಸೇರುವ ಅಂದಾಜಿದೆ. ಅಲ್ಲಮಪ್ರಭು ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದಿದ್ದೇವೆ. ಅಭಿಯಾನದ ಯಶಸ್ಸಿಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮಿತಿಗಳ ರಚನೆಯಾಗಬೇಕು. ವಸತಿ, ಊಟೋಪಚಾರ, ಸಾರಿಗೆ, ಪ್ರಚಾರ ಮೊದಲಾದ ಸಮಿತಿಗಳನ್ನು ರಚಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಪ್ರತಿನಿಧಿಗಳಾದ ಜಿ.ವಿ.ಹೆಗಡೆ ಬಿಸಲಕೊಪ್ಪ, ವೆಂಕಟರಮಣ ಭಟ್, ಸಮಿತಿಯ ಪ್ರಮುಖರಾದ ಕೆ.ಇ.ಕಾಂತೇಶ್, ಪಿ.ಪಿ.ಹೆಗಡೆ, ಹಿರಿಯಣ್ಣ ಹೆಗಡೆ, ಮ.ಸ.ನಂಜುಂಡಸ್ವಾಮಿ, ಅಶ್ವಿನಿ ಕುಮಾರ್, ಡಾ.ಬಾಲಕೃಷ್ಣ ಹೆಗಡೆ, ಟಿ.ಜೆ.ಲಕ್ಷ್ಮೀನಾರಾಯಣ, ಸಂದೇಶ ಉಪಾಧ್ಯ ಮುಂತಾದವರಿದ್ದರು.