ಸಂಪಾದಕೀಯ: ಸೂಕ್ತ ಸಿದ್ಧತೆ ಅಗತ್ಯ; ಮಳೆ ಅನಾಹುತ ತಡೆಗಟ್ಟಲು ಜನಪ್ರತಿನಿಧಿಗಳು ಕಾಳಜಿ ತೋರಲಿ

edit 2
Published on

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಮಳೆ ಇನ್ನಷ್ಟು ಬಿರುಸು ಪಡೆಯುವುದರೊಂದಿಗೆ, ಕೃಷಿ ಚಟುವಟಿಕೆಗಳೂ ಗರಿಗೆದರಲಿವೆ. ಕರಾವಳಿ ಭಾಗದಲ್ಲಿ ಮಂಗಳವಾರ (ಜೂನ್ 9) ಮಳೆ ಅಬ್ಬರಿಸುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 115.6 ಮಿ.ಮೀನಿಂದ 204.4 ಮಿ.ಮೀ ವರೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಈಗಷ್ಟೇ ಮುಂಗಾರು ಆರಂಭಗೊಂಡಿದೆ ಮತ್ತು ಈ ಬಾರಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಅಂದಾಜಿದೆ. ಹಾಗಾಗಿ, ಮಳೆ ಸಂಬಂಧಿ ಅನಾಹುತ ತಡೆಗಟ್ಟಲು ಸರ್ಕಾರ, ಜನಪ್ರತಿನಿಧಿಗಳು ಸಜ್ಜಾಗಬೇಕಿದೆ.

ಕಳೆದ ವರ್ಷವಷ್ಟೇ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳು ಭಾರಿ ನೆರೆಯಿಂದ ತತ್ತರಿಸಿವೆ. ಆ ಪೈಕಿ ಕೆಲ ಜಿಲ್ಲೆಗಳು ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಮತ್ತೆ ಪ್ರವಾಹ ಸ್ಥಿತಿ ತಲೆದೋರಿದರೆ ಆ ಸ್ಥಿತಿ ದೇವರಿಗೇ ಪ್ರೀತಿ. ಈ ಬಾರಿ ಕರೊನಾ ಸೋಂಕಿನ ಹಾವಳಿಯೂ ತೀವ್ರವಾಗಿದೆ. ಈ ಹೊಸ ಸವಾಲಿನ ವಿರುದ್ಧ ಸರ್ಕಾರ ಹೋರಾಡುತ್ತಿದೆಯಾದರೂ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ. ಆದ್ದರಿಂದಲೇ ಸರ್ಕಾರದ ಸಂಪೂರ್ಣ ಗಮನ ಕರೊನಾ ನಿಯಂತ್ರಣದತ್ತ ಇದೆ. ಇದು ಆಗಬೇಕಾದದ್ದೆ. ಆದರೆ, ಮುಂಗಾರಿನ ನಿಟ್ಟಿನಲ್ಲೂ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ನಮ್ಮ ನಗರ ವ್ಯವಸ್ಥೆ ಹೇಗಿದೆ ಎಂದರೆ ಒಂದೇ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು, ಹಲವು ಸಮಸ್ಯೆ ಎದುರಾಗುತ್ತವೆ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದು ಕೊಳ್ಳುವುದಾದರೆ, ಜೋರು ಮಳೆಗೆ ಚರಂಡಿಗಳು ಭರ್ತಿಯಾಗುವುದು, ಮುಖ್ಯ ರಸ್ತೆಗಳೇ ಕೆರೆಗಳಂತೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವುದು ಇತ್ಯಾದಿ ಪ್ರತಿವರ್ಷದ ಸಾಮಾನ್ಯ ದೃಶ್ಯಗಳು ಎಂಬಂತಾಗಿವೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿಯಾಗುವ ಅಧ್ವಾನಗಳು ಹಲವು. ಕಡಿಮೆ ಅಪಾಯದ, ತೀವ್ರ ಅಪಾಯದ ಸ್ಥಳ, ಜಿಲ್ಲೆಗಳನ್ನು ಗುರುತಿಸಿ, ಅಲ್ಲಿ

ಜಿಲ್ಲಾಡಳಿತವನ್ನು ಸಮರಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಅಗತ್ಯ. ಅಲ್ಲದೆ, ಜನಪ್ರತಿನಿಧಿಗಳು ಕೂಡ ಇಲ್ಲಿ ಮುಖ್ಯ ಪಾತ್ರವಹಿಸಬೇಕಾಗುತ್ತದೆ. ಆಯಾ ಜನಪ್ರತಿನಿಧಿಗಳಿಗೆ ಕ್ಷೇತ್ರದ ಭೌಗೋಳಿಕ ಮಾಹಿತಿ ಇರುವುದರಿಂದ ಅವರು ಮಳೆಹಾನಿ ತಗ್ಗಿಸಲು ಮತ್ತು ಮೊದಲೇ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಉತ್ತಮ ಮುಂಗಾರಿನ ಭರವಸೆ ಕೃಷಿರಂಗದಲ್ಲಿ, ರೈತರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ. ರೈತರಿಗೆ ವರುಣ ಸಹಾಯಹಸ್ತವಾಗಿ ಪರಿಣಮಿಸಿದರೆ ಅದು ದೊಡ್ಡ ಸಮಾಧಾನದ ಸಂಗತಿ. ಜತೆಗೆ, ವರುಣಾರ್ಭಟದಿಂದ ಸಂಭವನೀಯ ಆಸ್ತಿಪಾಸ್ತಿ, ಜೀವಹಾನಿಯನ್ನು ತಡೆಯಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಕರೊನಾ ವಿರುದ್ಧದ ಹೋರಾಟದಲ್ಲಿ ಈ ಸಂಗತಿ ಗೌಣವಾಗಿ ಹೋಗಬಾರದು. ಮುಂಗಾರು ಬರಮಾಡಿಕೊಳ್ಳಲು ಸೂಕ್ತ ಸಿದ್ಧತೆಗಳು ವೇಗದಿಂದ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ನಡೆಯುವಂತಾಬೇಕು. ಸೂಕ್ತ ಸಿದ್ಧತೆಯ ಬಲದಿಂದ ಒಡಿಶಾ ಇತ್ತೀಚೆಗೆ ಚಂಡಮಾರುತದ ಸವಾಲನ್ನೇ ಗೆದ್ದ ನಿದರ್ಶನ ನಮ್ಮ ಕಣ್ಣ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net