

ಬೆಂಗಳೂರು: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಆನೆ ಗಣತಿಗೆ ಸಿದ್ದತೆಗಳು ನಡೆದಿವೆ. ಮೇ 17ರಿಂದ ಪ್ರಕ್ರಿಯೆ ಆರಂಭಗೊಳ್ಳಬೇಕಿತ್ತು. ಆದರೆ ಕೇರಳ ರಾಜ್ಯದ ಅರಣ್ಯ ಇಲಾಖೆ ಸಿದ್ಧತೆಗೆ ಕಾಲಾವಾಕಾಶ ಕೇಳಿರುವುದರಿಂದ ಮುಂದಿನ ವಾರದಲ್ಲಿ ಆನೆಗಳ ಗಣತಿ ಕಾರ್ಯ ಶುರುವಾಗುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು, ಏಕಕಾಲದಲ್ಲಿ ನಡೆಯುವ ನಾಲ್ಕು ರಾಜ್ಯಗಳ ಆನೆಗಣತಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿನಲ್ಲಿ ಓಡಾಡಿ ಆನೆಗಳ ಲೆಕ್ಕ ಹಾಕಲಿದ್ದಾರೆ.
ವಿಶ್ವದಲ್ಲಿ ಭಾರತ ಅತಿ ಹೆಚ್ಚು ಆನೆಗಳಿರುವ ರಾಷ್ಟ್ರವಾಗಿದ್ದು, ಅದರಲ್ಲೂ ದಕ್ಷಿಣ ಭಾರತದಲ್ಲಿ ಆನೆಗಳ ಸಂಖ್ಯೆ ಹೆಚ್ಚು. ಕಳೆದ ವರ್ಷದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದ್ದು, 2017ರ ರಾಷ್ಟ್ರೀಯ ಗಣತಿಯಲ್ಲಿ 6049 ಇದ್ದ ಆನೆಗಳ ಸಂಖ್ಯೆ ಕಳೆದ ವರ್ಷದ ಪ್ರತ್ಯೇಕ ಗಣತಿಯಲ್ಲಿ 6395ಕ್ಕೆ ಏರಿದೆ.
ನೇರ ಏಣಿಕೆ, ಲದ್ದಿ ಏಣಿಕೆ ಮತ್ತು ನೀರಿನ ಹೊಂಡಗಳ ಏಣಿಕೆ ಹೀಗೆ ಆನೆ ಗಣತಿಯನ್ನು ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ. 5.0 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿ ಬ್ಲಾಕ್ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸುವುದು, 2 ಕಿ.ಮೀ ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಏಣಿಸುವುದು, ಹಾಗೂ ಆನೆಗಳು ನಿಯಮಿತವಾಗಿ ಭೇಟಿ ನೀಡುವ ನೀರಿನ ಹೊಂಡ ಮತ್ತಿತ್ತರ ಸ್ಥಳಗಳಲ್ಲಿ ಆನೆಗಳನ್ನು ಲೆಕ್ಕ ಹಾಕುವ ಮೂಲಕ ಗಣತಿ ಕಾರ್ಯ ನಡೆಯಲಿದೆ. ಈ ವಿಧಾನಗಳಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆನೆಗಣತಿ ನಡೆಯುತ್ತದೆ. ಆದರೆ ದಕ್ಷಿಣ ಭಾರತದ ಅರಣ್ಯ ಇಲಾಖೆಗಳ ಸಮನ್ವಯದಲ್ಲಿ ಪ್ರತ್ಯೇಕ ಗಣತಿಯನ್ನು ಕಳೆದ ವರ್ಷದಿಂದ ನಡೆಸಲಾಗುತ್ತಿದೆ. ಕರ್ನಾಟಕದ ಅರಣ್ಯ ಇಲಾಖೆಯ 32 ವಿಭಾಗಗಳಿಂದ 3400 ಕ್ಕೂ ಹೆಚ್ಚು ಸಿಬ್ಬಂದಿಗಳು ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದು, ಇತರೆ ಯಾರಿಗೂ ಅವಕಾಶವಿರುವುದಿಲ್ಲ. ಸಿಬ್ಬಂದಿಗಳಿಗೆ ಈ ಬಗ್ಗೆ ನಾಗರಹೊಳೆಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿ ತರಬೇತಿ ನೀಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.