ಈದ್ ಮಿಲಾದ್ ಮೆರವಣಿಗೆಗೆ ಶಿವಮೊಗ್ಗದಲ್ಲಿ ತಯಾರಿ

ed milad pripatation
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ವಿಶೇಷವಾಗಿ ಅಲಂಕಾರಗೊಂಡಿರುವ ಶಿವಮೊಗ್ಗ ಎಎ ವೃತ್ತ.
Published on

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ನಿಮಿತ್ತ ಸೆ.22ರಂದು ಶಿವಮೊಗ್ಗ ನಗರದಲ್ಲಿ ಮುಸ್ಲಿಮರಿಂದ ಮೆರವಣಿಗೆ ಹಮ್ಮಿಕೊಂಡಿದ್ದು ಇಡೀ ನಗರ ಹಸಿರುಮಯಗೊಂಡಿದೆ. ಪ್ರಮುಖ ರಸ್ತೆಗಳು, ವೃತ್ತಗಳು, ಹಸಿರು ಬಾವುಟಗಳು ಮತ್ತು ಬಂಟಿಂಗ್ಸ್‌ಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.

ಸೆ.17ರಂದು ಹಿಂದು ಸಂಘಟನಾ ಮಹಾಮಂಡಳಿಯು 80ನೇ ವರ್ಷದ ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದ ಕಾರಣ ಸೆ.16ರಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಸರಳವಾಗಿ ಆಚರಿಸಿ ಮೆರವಣಿಗೆಯನ್ನು ಭಾನುವಾರಕ್ಕೆ ಮುಂದೂಡಿದ್ದರು. ಅದರಂತೆ ಈದ್ ಮಿಲಾದ್ ಮೆರವಣಿಗೆಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಈದ್ ಮೆರವಣಿಗೆಗಾಗಿ ನಗರದ ಪ್ರಮುಖ ವೃತ್ತದಲ್ಲಿ ಅಲಂಕಾರ ಮಾಡಲಾಗಿದೆ. ಅಮೀರ್ ಅಹಮದ್ ವೃತ್ತದಲ್ಲಿ ಮೆಕ್ಕಮದೀನ ಕಲಾಕೃತಿ ನಿರ್ಮಿಸಲಾಗುತ್ತಿದೆ. ಮಹಾವೀರ ವೃತ್ತ, ಬೈಪಾಸ್, ಸೂಳೆಬೈಲು ಮತ್ತು ಮೆರವಣಿಗೆ ಹೋಗುವ ಮಾರ್ಗಗಳಲ್ಲಿ ಹಸಿರು ಬಾವುಟ, ಬಂಟಿಂಗ್ಸ್ ಕಟ್ಟಲಾಗಿದ್ದು ವಿಶೇಷ ಅಲಂಕಾರ ಮಾಡಲಾಗಿದೆ. ಮೆರವಣಿಗೆ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಿವಿಧೆಡೆ ವಾಹನ ಸಂಚಾರ, ನಿಲುಗಡೆ ನಿಷೇಧ ಮತ್ತು ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿದ್ದಾರೆ.

ಭದ್ರತೆಗೆ 3,500ಕ್ಕೂ ಅಧಿಕ ಖಾಕಿ ಪಡೆ
ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿಕೊಂಡಿದೆ. 3 ಎಎಸ್‌ಪಿ, 25 ಡಿವೈಎಸ್‌ಪಿ, 60 ಪೊಲೀಸ್ ಇನ್‌ಸ್ಪೆಕ್ಟರ್, 110 ಪಿಎಸ್‌ಐ, 200 ಎಎಸ್‌ಐ, 3500 ಮುಖ್ಯಪೇದೆ, ಪೇದೆಗಳು ಮತ್ತು ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌ಎಎಫ್ ತುಕಡಿ, 8 ಡಿಎಆರ್ ತುಕಡಿ, 1 ಕ್ಯೂಆರ್‌ಟಿ ತುಕಡಿ, 1 ಡಿಎಸ್‌ಡಬ್ಲುೃಎಟಿ ತುಕಡಿ, 10 ಕೆಎಸ್‌ಆರ್‌ಪಿ ತುಕಡಿಗಳು, 5 ಡ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್ ನಿಯೋಜಿಸಲಾಗಿದೆ.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಶನಿವಾರ ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಬ್ರೀಫಿಂಗ್ ನಡೆಸಿ ಬಂದೋಬಸ್ತ್ ವೇಳೆ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ, ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net