

ಮುಂಗಾರು ಪೂರ್ವ ಮಳೆಗೇ ಬೆಂಗಳೂರು ನಡುಗಿಹೋಗಿದೆ. ಭಾನುವಾರ ರಾತ್ರಿ 3 ಗಂಟೆ ಅವಧಿಯಲ್ಲಿ 132 ಮಿ.ಮೀ. ಮಳೆ ಸುರಿದಿದ್ದು, 10 ವರ್ಷದ ಬಳಿಕ ಮೇನಲ್ಲಿ ಒಂದೇ ದಿನ ಸುರಿದ ಮಳೆ ದಾಖಲೆಯಾಗಿದೆ. ಭಾರಿ ಮಳೆಯಿಂದ ರಾಜಧಾನಿ ತತ್ತರಿಸಿದ್ದು, ಎರಡೇ ದಿನಗಳಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮರಗಳು ಧರೆಗುರುಳಿವೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಹಲವು ಬಡಾವಣೆಗಳ ಬಂಡವಾಳವನ್ನೂ ಈ ಮಳೆ ಬಯಲು ಮಾಡಿದೆ. ಇದೇನಾ ‘ಬ್ರ್ಯಾಂಡ್ ಬೆಂಗಳೂರು’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸರಾಗವಾಗಿ ಮಳೆನೀರು ಹರಿದು ಹೋಗಲು ಆಸ್ಪದವೇ ಇಲ್ಲದ್ದರಿಂದ ರಸ್ತೆಗಳೇ ಹೊಳೆಗಳಂತಾಗಿವೆ. ಇನ್ನು, ರಾಜಕಾಲುವೆ, ಚರಂಡಿಗಳ ನೀರು ರಸ್ತೆಗಳಿಗೆ ನುಗ್ಗಿದ್ದರಿಂದ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಹೈರಾಣಾದರು. ಹಲವೆಡೆ ತಗ್ಗು ಪ್ರದೇಶಗಳಲ್ಲಿನ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೂ ನೀರು ನುಗ್ಗಿತು.
ಹೊಳೆಯಂತಾಗಿರುವ ರಸ್ತೆಗಳ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಗರ ವ್ಯವಸ್ಥೆ ಕುರಿತಾಗಿ ಹಲವು ಬಗೆಗಳಲ್ಲಿ ಚರ್ಚೆ ನಡೆಯುತ್ತಿದೆ. ಅದೇನೇ ಇದ್ದರೂ, ಮಳೆಯನ್ನು ಎದುರಿಸಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸಮರ್ಪಕವಾಗಿ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದು ಈ ಚಿತ್ರಣದಿಂದ ಸ್ಪಷ್ಟವಾಗುತ್ತದೆ. ಕೆರೆಗಳು ಹಾಗೂ ರಾಜಕಾಲುವೆಗಳ ಒತ್ತುವರಿ ತೆರವಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈ ವರ್ಷ ಮಳೆಗಾಲಕ್ಕೂ ಮುನ್ನ ಚರಂಡಿಗಳು ಮತ್ತು ರಾಜಕಾಲುವೆಗಳಲ್ಲಿನ ಹೂಳು ತೆಗೆಯುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ.
‘ಮಳೆಗಾಲ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ಹಲವು ಬಾರಿ ಹೇಳಿದ್ದರು. ಆದರೆ, ಬೆಂಗಳೂರು ಸಾಧಾರಣ ಮಳೆಗೂ ಮತ್ತೆ ಮತ್ತೆ ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ನೋಡಿದರೆ, ಪ್ರವಾಹ ತಡೆಗೆ ದೀರ್ಘಕಾಲೀನ ಯೋಜನೆ, ಕ್ರಮಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂಬುದು ಸ್ಪಷ್ಟ. ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಮೂಲಸೌಕರ್ಯ ವಿಷಯದಲ್ಲಿ ಗೊಂದಲ ಏರ್ಪಟ್ಟಿದ್ದು, ರಸ್ತೆಗಳು ಯಾವವು, ಗುಂಡಿಗಳು ಯಾವವು ಎಂದು ಅರಿಯದಂಥ ದಾರುಣ ಸ್ಥಿತಿ ಇದೆ. ಇದು ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಸಾಕ್ಷಿ.
ಅಲ್ಲದೆ, ಜೂನ್ ಮೊದಲ ವಾರದಲ್ಲೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮಳೆ ಎದುರಿಸುವುದಕ್ಕೆ ಸರ್ಕಾರ ಸನ್ನದ್ಧವಾಗಬೇಕಿದೆ. ಮುಖ್ಯವಾಗಿ, ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಪೂರ್ವ ಮಳೆಗೆ ಬೆಂಗಳೂರಿಗೆ ಆದ ಸ್ಥಿತಿ, ಬೆಂಗಳೂರಿಗರು ಅನುಭವಿಸಿದ ತೊಂದರೆಯನ್ನು ನೋಡಿದರೆ ಮುಂದಿನ ನಾಲ್ಕು ತಿಂಗಳು ಹೇಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ಮಳೆ ಸಂಬಂಧಿತ ಹಾನಿಯನ್ನು ತಡೆಗಟ್ಟಲು ಸರ್ಕಾರದ ಇಚ್ಛಾಶಕ್ತಿ ತುಂಬ ಅವಶ್ಯ ಎಂಬುದನ್ನು ಮರೆಯುವಂತಿಲ್ಲ. ಅಧಿಕಾರಿಗಳು ಜಡತ್ವವನ್ನು ತೊರೆದು ಜನರ ಸಂಕಷ್ಟವನ್ನು ಅರಿಯುವ, ಸಂವೇದನೆಗೆ ಮಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಮುಂದಿನ ದಿನಗಳ ಮಳೆಯನ್ನು ಎದುರಿಸಲು, ಹಾನಿಯ ಪ್ರಮಾಣವನ್ನು ತಗ್ಗಿಸಲು, ಜನರಿಗೆ ಸೂಕ್ತ ನೆರವು ಒದಗಿಸಲು ಶ್ರಮಿಸಬೇಕು, ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು.