ಸಂಪಾದಕೀಯ: ಸೂಕ್ತ ಸಿದ್ಧತೆ ಅಗತ್ಯ; ಕರೊನಾ ನಡುವೆಯೇ ಮತ್ತಷ್ಟು ಸಾಂಕ್ರಾಮಿಕ ರೋಗಗಳ ಭೀತಿ

edit 4
Published on

ಕರೊನಾ ಸೋಂಕಿತರ ಸಂಖ್ಯೆ ದೇಶ ಮತ್ತು ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಕರೊನಾದ ವಿರುದ್ಧ ಆರೋಗ್ಯ ವ್ಯವಸ್ಥೆ ಹೋರಾಟ ನಡೆಸುತ್ತಿರುವಾಗಲೇ ಮುಂಗಾರು ಅಡಿಯಿಟ್ಟಿದ್ದು, ಹಲವು ಸಾಂಕ್ರಾಮಿಕ ಕಾಯಿಲೆಗಳ ಭೀತಿ ರಾಜ್ಯದಲ್ಲಿ ಎದುರಾಗಿದೆ. ಸೊಳ್ಳೆಗಳಿಂದ ಹರಡುವ ಡೆಂಗೆ, ಚಿಕೂನ್​ಗುನ್ಯಾ, ಮಲೇರಿಯಾ, ಮಿದುಳುಜ್ವರ ಸೇರಿ ಹಲವು ಕಾಯಿಲೆಗಳು ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಜುಲೈ ತಿಂಗಳಲ್ಲೇ ಕರೊನಾ ಮತ್ತಷ್ಟು ಹೆಚ್ಚಲಿದೆ ಎಂದು ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯಕರ ನಿಯಮ ಪಾಲನೆಯ ಬಗ್ಗೆ ಜನರೂ ನಿರ್ಲಕ್ಷ್ಯ ತಳೆದಿದ್ದಾರೆ. ವೈಯಕ್ತಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಧರಿಸುತ್ತಿಲ್ಲ. ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದರಿಂದಾಗಿ ಕರೊನಾ ಜತೆಗೆ ಇತರೆ ಸೋಂಕು ರೋಗಗಳು ಸಹ ಬಾಧಿಸಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಸಾಂಕ್ರಾಮಿಕ ರೋಗಗಳನ್ನು ತಡೆಯುವ ಮತ್ತು ಅವುಗಳ ವಿರುದ್ಧ ಹೋರಾಡುವ ಸ್ಥಿತಿಗೆ ಸರ್ಕಾರ ಮತ್ತು ಜನಸಾಮಾನ್ಯರು ಸಜ್ಜಾಗಬೇಕಿದೆ. ಸರ್ಕಾರ ಕರೊನಾ ಸೋಂಕು ಪೀಡಿತರಿಗಾಗಿ ಆಸ್ಪತ್ರೆಯ ಹಾಸಿಗೆಗಳನ್ನು ಮೀಸಲಿಟ್ಟಿರುವುದರಿಂದ, ಇತರ ಚಿಕಿತ್ಸೆಗಳನ್ನು ನಿರಾಕರಿಸಲಾಗುತ್ತಿದೆ. ಇದರಿಂದ ಕರೊನಾ ಹೊರತಾದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುತ್ತಿದ್ದಾರೆ. ಇತರ ಸಾಂಕ್ರಾಮಿಕ ರೋಗಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸರ್ಕಾರವೂ ಸಜ್ಜಾಗಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯುವುದು ಸಲ್ಲ.

ರಾಜ್ಯದಲ್ಲಿ ಈವರೆಗೆ ಡೆಂಗೆ, ಚಿಕೂನ್​ಗುನ್ಯಾ, ಮಲೇರಿಯಾ, ಜಪಾನಿಸ್ ಎನ್​ಸೆಫಲೈಟಿಸ್ (ಮಿದುಳು ಜ್ವರ), ಅಕ್ಯೂಟ್ ಎನ್​ಸೆಫಲೈಟಿಸ್ ಸಿಂಡ್ರೋಮ್ ಫೈಲೇರಿಯಾ ಪ್ರಕರಣಗಳು ವರದಿಯಾಗಿವೆ. ಮಳೆಗಾಲದ ಅವಧಿ ಕಳೆಯುವವರೆಗೂ ಇಂಥ ಕಾಯಿಲೆಗಳು ಹರಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ, ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಗೆ ಇರುವ ಔಷಧ ಲಭ್ಯತೆ ಖಾತ್ರಿ ಪಡಿಸಿಕೊಳ್ಳಬೇಕು. ಕರೊನಾ ನೆಪದಲ್ಲಿ ಇತರ ರೋಗಿಗಳನ್ನು ನಿರ್ಲಕ್ಷಿಸಬಾರದು.

ಸ್ವಚ್ಛತೆಯ ಕೊರತೆಯೂ ಕಾಯಿಲೆಗಳು ಹರಡಲು ಪ್ರಮುಖ ಕಾರಣ. ಇಲ್ಲಿ ಸರ್ಕಾರದ ಪ್ರಯತ್ನದ ಜತೆಗೆ ನಾಗರಿಕರೂ ತಮ್ಮ ಕರ್ತವ್ಯ, ಜವಾಬ್ದಾರಿ ಅರಿಯಬೇಕು. ಸ್ವಚ್ಛತೆ ಕಾಯ್ದುಕೊಳ್ಳಲು ಪ್ರಮುಖ ಆದ್ಯತೆ ನೀಡಬೇಕು, ಆ ಮುಖೇನ ಸೊಳ್ಳೆಗಳ ಹಾವಳಿ ನಿಯಂತ್ರಿಸಬೇಕು. ಈಗಾಗಲೇ ಕರೊನಾ ವಿರುದ್ಧದ ಹೋರಾಟ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಒತ್ತಡ ಸೃಷ್ಟಿಸಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮತ್ತಷ್ಟು ಸಾಂಕ್ರಾಮಿಕ ಕಾಯಿಲೆಗಳು ಆ ಒತ್ತಡ ಹೆಚ್ಚಿಸಬಾರದು. ಇದಕ್ಕಾಗಿ, ಈಗಿನಿಂದಲೇ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ, ರೋಗಲಕ್ಷಣ, ಚಿಕಿತ್ಸಾವಿಧಾನ ಇತ್ಯಾದಿ ಪ್ರಮುಖ ವಿವರಗಳ ಬಗ್ಗೆ ಸರ್ಕಾರ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ, ಸರ್ಕಾರಿ ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಸನ್ನದ್ಧಗೊಳಿಸಬೇಕು. ಸೂಕ್ತ ಸಿದ್ಧತೆ ಮಾಡಿಕೊಂಡರೆ ಸಮಸ್ಯೆ ಮತ್ತು ಹಾನಿಯ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net