ಕರೊನಾ ಆತಂಕದಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸಜ್ಜು

Flower
Published on

ಬೆಂಗಳೂರು: ಸೋಂಕು ಭೀತಿ ನಡುವೆಯೂ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಉದ್ಯಾನನಗರಿ ಸಜ್ಜಾಗಿದೆ. ಹಬ್ಬದ ಮುನ್ನಾದಿನ ನಗರದ ಬಹುತೇಕ ರಸ್ತೆ ಬದಿಗಳಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದ ದೃಶ್ಯ ಬುಧವಾರ ಕಂಡುಬಂದಿತು. ಕೃ.ರಾ. ಮಾರುಕಟ್ಟೆ ಸಗಟು ಹೂವಿನ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರು ಕಟ್ಟೆ ವ್ಯಾಪಾರ ವಹಿವಾಟಿಗೆ ಪಾಲಿಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯ ಹಾಗೂ ಪ್ರಮುಖ ಬಡಾವಣೆಗಳಲ್ಲಿ ವ್ಯಾಪಾರಕ್ಕೆ ಕೆಲ ವರ್ತಕರು ಮುಂದಾಗಿದ್ದಾರೆ.

ಶೇ.50 ಹೂವು, ಹಣ್ಣಿನ ವ್ಯಾಪಾರ: ಶ್ರಾವಣ ಮಾಸದ ಹಬ್ಬಗಳಲ್ಲಿ ನಗರದ ಎಲ್ಲ ಬಡಾವಣೆಗಳಲ್ಲೂ ಹೂವು, ಹಣ್ಣು ವ್ಯಾಪಾರ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಸೋಂಕುವ ಆತಂಕದಿಂದ ಶೇ.50 ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಮಾರುಕಟ್ಟೆ ಸೀಲ್​ಡೌನ್ ಆಗಿದೆಯಾದರೂ ಕೆಲ ವರ್ತಕರು ಅಲ್ಲಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿದ್ದಾರೆ.

ದುಪ್ಪಟ್ಟು ಬೆಲೆ: ಸೇಬು 80- 140 ರೂ., ಮೂಸಂಬಿ 15- 50 ರೂ., ದಾಳಿಂಬೆ 50-110 ರೂ., ಬಾಳೆಹಣ್ಣು (ಏಲಕ್ಕಿ) 50-52 ರೂ., ಸಪೋಟ 20- 50 ರೂ., ಸೀತಾಫಲ 30-60 ರೂ. ಹಾಗೂ ಅನಾನಸ್ 20-25 ರೂ. ಕೆ.ಜಿಗೆ ಸಗಟು ಮಾರುಕಟ್ಟೆ ದರ ಇದೆ. ಜೆ.ಪಿ. ನಗರ, ಜಯನಗರ, ಗಾಂಧಿಬಜಾರ್, ಮಲ್ಲೇಶ್ವರ ಮುಂತಾದ ಬಡಾವಣೆಗಳ ಚಿಲ್ಲರೆ ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿ ಹೂವು, ಹಣ್ಣುಗಳನ್ನು ದುಪ್ಪಟ್ಟು ಬೆಲೆ ಮಾರಾಟ ಮಾಡುತ್ತಿದ್ದಾರೆ.

ನೇರ ಮಾರಾಟ

ರೈತರು ಬೆಳೆದ ಹೂವುಗಳನ್ನು ಸೀಗೆಹಳ್ಳಿ, ಮಹಾಲಕ್ಷ್ಮೀ ಲೇಔಟ್, ಆವಲಹಳ್ಳಿ, ಕೆ.ಆರ್. ಪುರ, ಸಿದ್ದಾಪುರ, ಯಲಹಂಕ , ಮೈಸೂರು ರಸ್ತೆ, ಕನಕಪುರ ರಸ್ತೆ ಸೇರಿ ನಗರದ ಬಹುತೇಕ ಪ್ರದೇಶಗಳಲ್ಲಿ ವರ್ತಕರು ಹಾಗೂ ನೇರ ರೈತರಿಂದ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಕರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದೆ. ಆದರೆ ಹಬ್ಬಕ್ಕೆ ಹೂವು, ಹಣ್ಣುಗಳ ಮಾರಾಟ ಅನಿವಾರ್ಯ. ವ್ಯಕ್ತಿಗತ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಮುಂದಾಗಿದ್ದೇವೆ. | ರಮೇಶ್ ಹೂವಿನ ಸಗಟು ವ್ಯಾಪಾರಿ

ಲಕ್ಷಿ್ಮೕ ಮುಖವಾಡ ಕಲೆಗೆ ಬೇಡಿಕೆ

ಬೆಂಗಳೂರು: ಶ್ರಾವಣ ಮಾಸದ ಎರಡನೇ ಶುಭ ಶುಕ್ರವಾರ (ಜುಲೈ 31) ಆಚರಿಸಲಾಗುತ್ತಿರುವ ವರಮಹಾಲಕ್ಷಿ್ಮೕ ಹಬ್ಬಕ್ಕೆ ಕರೊನಾ ನಡುವೆಯೂ ತಯಾರಿ ಜೋರಾಗಿದ್ದು, ಲಕ್ಷಿ್ಮೕ ವ್ರತಕ್ಕೆಬೇಕಾದ ಅಗತ್ಯವಸ್ತುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಈ ಬಾರಿ ಹೆಚ್ಚು ಟ್ರೆಂಡ್​ನಲ್ಲಿರುವುದು ಲಕ್ಷಿ್ಮೕ ಮುಖವಾಡದ ಪೇಂಟಿಂಗ್​ಗೆ. ಬೆಳ್ಳಿಯ ಮುಖವಾಡಕ್ಕೆ ತಾವೇ ಮನೆಯಲ್ಲಿ ಅಲಂಕಾರ ಮಾಡುತ್ತಿದ್ದ ಮಹಿಳೆಯರು, ಈ ಬಾರಿ ಕಲಾ ವಿದರ ಕುಂಚದಿಂದ ತಿದ್ದಿ ತೀಡಿಸಿ, ಸಿರಿದೇವಿಯ ಅಂದವನ್ನು ದುಪ್ಪಟ್ಟು ಮಾಡಿಸುತ್ತಿದ್ದಾರೆ. ಕೇವಲ ಬೆಳ್ಳಿ ಮುಖವಾಡವಷ್ಟೇ ಅಲ್ಲದೆ, ತಾಮ್ರ, ಪ್ಲಾಸ್ಟರ್ ಆಫ್ ಪ್ಯಾರಿಸ್, ಮಣ್ಣಿನ ಲಕ್ಷಿ್ಮೕ, ಮರದ ಮುಖವಾಡಗಳ ಮೇಲೂ ಕಲಾವಿದರಿಂದ ಅಲಂಕೃತಗೊಳಿಸುತ್ತಿದ್ದಾರೆ. ಲಕ್ಷಿ್ಮೕ ವಿಗ್ರಹಗಳ ಅಂದ ಮತ್ತಷ್ಟು ಹೆಚ್ಚಿಸಿ ಎಂಬ ಬೇಡಿಕೆ ಹೆಚ್ಚಾಗಿ ಬರುತ್ತಿವೆ. ಪೇಂಟಿಂಗ್ ಮೂಲಕ ದೇವಿಯ ಕಣ್ಣು, ತುಟಿ, ಆಭರ್ಙಣಗಳ ಅಂದವನ್ನು ಹೆಚ್ಚಿಸುತ್ತೇವೆ. 4 ತಿಂಗಳಿಂದಲೇ ಆರ್ಡರ್​ಗಳು ಬರುತ್ತಿವೆ. ಅನೇಕರು ಮನೆಗೇ ಬಂದು ಲಕ್ಷಿ್ಮೕ ಮುಖವಾಡಗಳನ್ನು ಕೊಟ್ಟು ಹೋಗುತ್ತಿದ್ದರು. ಲಾಕ್​ಡೌನ್ ಸಂದರ್ಭದಲ್ಲೂ ಪೇಂಟಿಂಗ್ ಮಾಡಿಕೊಡುತ್ತಿದ್ದೆವು ಎನ್ನುತ್ತಾರೆ ಕಲಾವಿದೆ ಭವ್ಯಾ ರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net